ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಖರ್ಗೆ, ಧರಂ ತವರಲ್ಲಿ ಹಳಬರದ್ದೇ ಹವಾ

Parashurama
Updated On : 23 Mar 2013, 12:11 pm

ಕ.ಪ್ರ. ವಾರ್ತೆ ಗುಲ್ಬರ್ಗ ಮಾ.22
ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಧರಂಸಿಂಗ್ ತವರು ಗುಲ್ಬರ್ಗದಲ್ಲಿ ಈಗ ಅಸೆಂಬ್ಲಿ ಯುದ್ಧದಲ್ಲಿ ಹೊಸ ಮುಖಗಳಿಗೆ ಅವಕಾಶ ಅಷ್ಟಕ್ಕಷ್ಟೆ.
ಜಿಲ್ಲೆಯ 9 ಕ್ಷೇತ್ರಗಳಲ್ಲಿ ಕೈ 3 ಕಡೆ ಶಾಸಕರನ್ನು ಹೊಂದಿತ್ತು. ಈ 3 ಕ್ಷೇತ್ರಗಳಲ್ಲಿ ಹಳಬರಿಗೆ (ಸಿಟ್ಟಿಂಗ್ ಎಂಎಲ್‌ಎಗಳು) ಮಣೆ ನಿಶ್ಚಿತ. ಇನ್ನು ಖರ್ಗೆ ಪುತ್ರ ಪ್ರಿಯಾಂಕ್, ಧರಂಸಿಂಗ್ ಪುತ್ರ ಡಾ. ಅಜಯ್ ಇಬ್ಬರಿಗೂ ಕ್ರಮವಾಗಿ ಚಿತ್ತಾಪುರ (ಮೀಸಲು) ಮತ್ತು ಜೇವರ್ಗಿ ಮತಕ್ಷೇತ್ರಗಳು ರಿಜರ್ವ್ಡ್. ಗುಲ್ಬರ್ಗ (ದಕ್ಷಿಣ), ಗುಲ್ಬರ್ಗ (ಗ್ರಾಮೀಣ) ಮತ್ತು ಆಳಂದದಲ್ಲಿ ಪಕ್ಷಕ್ಕೆ ಹೊಸ ಮುಖಗಳನ್ನು ಕಣಕ್ಕಿಳಿಸುವ ಅವಕಾಶವಿದ್ದರೂ ಟಿಕೆಟ್ ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಇರುವ ಕಾರಣ ಇಲ್ಲಿಯೂ ಕೈ ಪಾಳಯದಿಂದ ಹಳಬರಿಗೆ ಮನ್ನಣೆ ನೀಡುವ ಲಕ್ಷಣಗಳು ಸ್ಪಷ್ಟವಾಗಿವೆ.
ವಂಶಪಾರಂಪರ್ಯ ರಾಜಕೀಯದ ದ್ಯೋತಕವಾಗಿರುವ ಡಾ. ಅಜಯ್, ಪ್ರಿಯಾಂಕ್ ಜೋಡಿ ಈಗಾಗಲೇ ಒಂದು ಸುತ್ತು ಅದೃಷ್ಟ ಪರೀಕ್ಷೆಗೆ ಮುಂದಾಗಿ ಸೋಲುಂಡಿದ್ದಾರೆ. 2008ರಲ್ಲಿ ಖರ್ಗೆ ತಾವು ಗೆದ್ದಿದ್ದ ಚಿತ್ತಾಪುರ ಅಸೆಂಬ್ಲಿ ಕ್ಷೇತ್ರವನ್ನು ಬಿಟ್ಟು ಕೊಟ್ಟು 2009ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರಿಂದ ನಡೆದ ಉಪ ಚುನಾವಣೆಯಲ್ಲಿ ಪ್ರಿಯಾಂಕ್ ಸ್ಪರ್ಧಿಸಿ ಸೋತಿದ್ದರು.
ಅಜಯ್‌ಗೆ ಒಲಿಯುವುದೆ ಜೇವರ್ಗಿ?: 2008ರ ಚುನಾವಣೆಯಲ್ಲಿ ಧರಂಸಿಂಗ್ ಸೋಲನುಭವಿಸುವುದರೊಂದಿಗೆ ರಾಜಕೀಯ ತಲ್ಲಣಕ್ಕೆ ನಾಂದಿ ಹಾಡಿದ್ದ ಜೇವರ್ಗಿ ಕೋಟೆ ಮತ್ತೆ ವಶಪಡಿಸಿಕೊಳ್ಳಲು ಡಾ.ಅಜಯ್ ಉತ್ಸುಕರಾಗಿದ್ದಾರೆ. ತಂದೆಯ ಹೆಸರಲ್ಲಿ ಟಿಕೆಟ್ ಕೇಳುತ್ತಿಲ್ಲ, ಜನಮನ ಗೆದ್ದಿರುವೆ ಎಂದು ಕಳೆದ 14 ವರ್ಷಗಳಿಂದ ಜೇವರ್ಗಿ ಸುತ್ತುತ್ತಿರುವ ಡಾ.ಅಜಯ್, ಈ ಬಾರಿ ತಮ್ಮ ತಂದೆಗೆ ಸತತ 8 ಬಾರಿ ಒಲಿದಿದ್ದ ಜೇವರ್ಗಿಯಲ್ಲೇ ತಮ್ಮ ರಾಜಕೀಯ ಅದೃಷ್ಟವನ್ನು 2ನೇ ಬಾರಿಗೆ ಪರೀಕ್ಷೆಗೆ ಒಡ್ಡಲು ಮುಂದಾಗಿದ್ದಾರೆ.
ವಿಪ್ರರ ಬೇಡಿಕೆ ಕೈಹಿಡಿಯಲ್ಪಡುವುದೆ?: ಗುಲ್ಬರ್ಗ (ದಕ್ಷಿಣ) ಕ್ಷೇತ್ರಕ್ಕೆ ಮಾಜಿ ಸಿಎಂ ವೀರೇಂದ್ರ ಪಾಟೀಲರ ಪುತ್ರ ಕೈಲಾಸ್ ಪಾಟೀಲರನ್ನು ತರಬೇಕು ಎಂದಿದ್ದ ಕಾಂಗ್ರೆಸ್‌ಗೆ ಇಲ್ಲೀಗ ಸ್ಥಳೀಯವಾಗಿ ಅಧಿಕವಾಗಿರುವ ವಿಪ್ರರು ನಮಗೂ ಪ್ರಾತಿನಿಧ್ಯ ಕೊಡಿ ಎಂದು ಇಟ್ಟಿರುವ ಬೇಡಿಕೆ ಅಪಥ್ಯವಾಗಿದೆ. ಗುಲ್ಬರ್ಗ ವಿಪ್ರರಿಗೆ ಅವಕಾಶ ನೀಡಲು ಕಾಂಗ್ರೆಸ್‌ಗೆ ಹೇಳಿ ಮಾಡಿಸಿದ ಕ್ಷೇತ್ರ. ಇಲ್ಲಿ ವಿಪ್ರರ ಜತೆ ಒಬಿಸಿ, ಎಸ್‌ಸಿ, ಎಸ್ಟಿ, ಅಲ್ಪಸಂಖ್ಯಾತರೂ ಒಂದಾದಲ್ಲಿ ಕೈ ಗೆಲವು ನಿಶ್ಚಿತ ಎಂಬ ತರ್ಕದೊಂದಿಗೆ ಸ್ಥಳೀಯವಾಗಿರುವ ಉದ್ಯಮಿ ಕೃಷ್ಣಾಜಿ ಟಿಕೆಟ್‌ಗಾಗಿ ತೀವ್ರ ಒಲವು ತೋರಿದ್ದಾರೆ. ಈಚೆಗೆ ಖರ್ಗೆ ಸಮ್ಮುಖದಲ್ಲಿ ನಡೆಸಲಾದ ವಿಪ್ರ ಸಮಾವೇಶ ಪಕ್ಷದ ಹೈಕಮಾಂಡ್‌ಗೆ ಹೊಸ ಸಂದೇಶವನ್ನೂ ರವಾನಿಸಿದೆ. ಇದರಿಂದಾಗಿ ಕೈಲಾಸ ಪಾಟೀಲರಿಗೆ ಇಲ್ಲಿಗೆ ಕರೆ ತರಬೇಕು ಎಂದಿದ್ದ ಕಾಂಗ್ರೆಸ್ ಕೊನೆ ಗಳಿಗೆಯಲ್ಲಿ ಗಲಿಬಿಲಿಗೊಳಗಾಗಿದೆ. ಚಿಂಚೋಳಿಯಲ್ಲಿ ಮಾಜಿ ಸಚಿವ ಬಾಬುರಾವ್ ಚವ್ಹಾಣ್, ಡಾ. ಉಮೇಶ ಜಾಧವ, ಭೀಮರಾವ್ ತೇಗಲತಿಪ್ಪಿ ಮಧ್ಯೆ ಪೈಪೋಟಿ ಇದೆ.
ಅಫಜಲ್ಪೂರಕ್ಕೆ ಯಾರಯ್ಯ?: ಇನ್ನು ಹಾಲಿ ಶಾಸಕರ ಪೈಕಿ ಸೇಡಂಗೆ ಡಾ. ಶರಣಪ್ರಕಾಶ ಪಾಟೀಲ್, ಗುಲ್ಬರ್ಗ (ಉತ್ತರ) ಕ್ಕೆ ಖಮರುಲ್ ಇಸ್ಲಾಂ ಟಿಕೆಟ್ ಗಟ್ಟಿ. ಆದರೆ ಇದೇ ಪಟ್ಟಿಯಲ್ಲಿರುವ ಅಫಜಲ್ಪೂರ ಶಾಸಕ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ವಿರುದ್ಧ ಅನೇಕ ಟೀಕೆಗಳನ್ನು ಮಾಡಿದ್ದು, ಇವರಿಗೆ ಟಿಕೆಟ್ ಸಿಗೋದು ಡೌಟ್.
- ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments