ಮಲೆನಾಡಿಗೆ ಬೇಡವಾದ ಮಹಿಳೆ
ಕ.ಪ್ರ. ವಾರ್ತೆ ಶಿವಮೊಗ್ಗ ಮಾ.22-
ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದ್ದಂತೆ ಮತ್ತದೇ ಪ್ರಶ್ನೆ ಮೇಲೆದ್ದಿದೆ. ಈ ಬಾರಿ ಜಿಲ್ಲೆಯಲ್ಲಿ ಯಾವುದಾದರೂ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಆದ್ಯತೆ ನೀಡುತ್ತವೆಯೇ- ಸದ್ಯ ಪರಿಸ್ಥಿತಿ ನಿರಾಶಾದಾಯಕವಾಗಿದೆ. ಆಕಾಂಕ್ಷಿಗಳು, ಸಮರ್ಥರು ಇದ್ದರೂ ಸಹ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡುವುದಕ್ಕೆ ಮನಸ್ಸು ಮಾಡುತ್ತಿಲ್ಲ.
ಜಿಲ್ಲೆಯ ರಾಜಕೀಯ ಇತಿಹಾಸವೂ ಸಹ ಇದನ್ನೇ ಬಿಂಬಿಸುತ್ತದೆ. ಸ್ವತಂತ್ರ್ಯ ಭಾರತದ ಮೊದಲೆರಡು ಚುನಾವಣೆ ಹೊರತುಪಡಿಸಿ 1962ರಿಂದ ಯಾವ ಮಹಿಳೆಯೂ ಸಹ ಮಲೆನಾಡಿನಲ್ಲಿ ಗೆದ್ದಿಲ್ಲ.
ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, ಇವುಗಳಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಶಿವಮೊಗ್ಗ ನಗರ, ತೀರ್ಥಹಳ್ಳಿ, ಸಾಗರ ಕ್ಷೇತ್ರದಲ್ಲಿ ಸಮಬಲರಿದ್ದಾರೆ. ಆದರೆ, ಮಹಿಳೆಯರ ಗೆಲವಿನ ಅವಕಾಶ ಮಾತ್ರ ಕಡಿಮೆಯಾಗುತ್ತಿದೆ.
ಸದ್ಯ ಖಚಿತ ಸುದ್ದಿಯ ಪ್ರಕಾರ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶಾರದಾ ಪೂರ್ಯನಾಯ್ಕ್ ಅವರು ಕಣಕ್ಕಿಳಿಯಲಿದ್ದಾರೆ. ಇವರು 50 ವರ್ಷಗಳ ನಂತರ ಮಲೆನಾಡಿನಿಂದ ವಿಧಾನಸಭೆ ಪ್ರವೇಶಿಸುವ ಮಹಿಳೆಯಾಗುವರೇ ಎಂದು ಪ್ರಜೆಗಳೇ ಹೇಳಬೇಕಾಗಿದೆ. ಉಳಿದ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಲು ಮನಸು ಮಾಡಬೇಕಿದೆ.
ಅರ್ಹರಿದ್ದಾರೆ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಇರುವ ಮಹಿಳೆಯರು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಕರ್ನಾಟಕ ಜನತಾ ಪಕ್ಷದ ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆಯಾಗಿರುವ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ. ಮಂಜುಳಾ ಅವರು ಭದ್ರಾವತಿ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಇಚ್ಛೆ ತೋರಿದ್ದಾರೆ. ಆದರೆ, ಪಕ್ಷದ ಮುಖಂಡರು ಈ ಕಷ್ಟದಾಯಕ ಕ್ಷೇತ್ರದಲ್ಲಿ ಮಹಿಳೆಯನ್ನು ಕಣಕ್ಕಿಳಿಸುವುದಕ್ಕಿಂತ ಮಂಜುಳಾ ಅವರನ್ನು ಮುಂದೆ ಬೇಕಾದರೆ ವಿಧಾನಪರಿಷತ್ಗೆ ಕಳಿಸಬಹುದು ಎಂಬ ಚಿಂತನೆ ಹೊಂದಿದ್ದಾರೆ.
ಇದೇ ಪಕ್ಷದ ಒಲವು ಹೊಂದಿರುವ ಭಾರತಿ ಶೆಟ್ಟಿ ಅವರು ಸೊರಬ ಕ್ಷೇತ್ರದವರಾಗಿದ್ದು, ಅಲ್ಲಿ ಹರತಾಳು ಹಾಲಪ್ಪ ಸ್ಪರ್ಧಿಸುತ್ತಿರುವುದರಿಂದ ಜಾಗ ಖಾಲಿ ಇಲ್ಲ. ಸದ್ಯ ಭಾರತಿ ಶೆಟ್ಟಿ ಅವರು ವಿಧಾನಪರಿಷತ್ ಸದಸ್ಯತ್ವಕ್ಕೇ ಖುಷಿಯಾಗಿದ್ದಾರೆ.
ಕಾಂಗ್ರೆಸ್ನ ಪ್ರಮುಖರಾದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಬಲ್ಕಿಷ್ ಭಾನು ಮುಂತಾದವರು ಜನರ ನೆನಪಿನಿಂದ ಮರೆಯಾಗಿದ್ದಾರೆ. ಅಧಿಕಾರವಿಲ್ಲದ ಐದು ವರ್ಷ ಕಾಂಗ್ರೆಸ್ ಪಕ್ಷಕ್ಕೆ ಮಂಕು ಕವಿಸಿದೆ. ಇನ್ನು ಬಿಜೆಪಿಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವಷ್ಟು ಮಹಿಳಾ ಮುಖಂಡರ್ಯಾರೂ ಬೆಳೆದಿಲ್ಲ ಎಂದು ವರಿಷ್ಠರು ಭಾವಿಸಿದ್ದಾರೆ. ಸದ್ಯ ಜೆಡಿಎಸ್ನ ಶಾರದಾ ಪೂರ್ಯಾನಾಯ್ಕ್ ಅವರೇ ಜಿಲ್ಲೆಯ ಇಡೀ ಮಹಿಳಾ ಕುಲದ ರಾಜಕೀಯ ಸ್ಪರ್ಧೆಯ ಪ್ರತಿನಿಧಿ.
ಇತಿಹಾಸವಿದು: ಮಹಿಳೆಯೊಬ್ಬರನ್ನು ವಿಧಾನಸಭೆಗೆ ಕಳುಹಿಸಿದ ಹೆಗ್ಗಳಿಕೆ ಶಿವಮೊಗ್ಗ ಕ್ಷೇತ್ರದ್ದು. 1957ರಲ್ಲೇ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ರತ್ನಮ್ಮ ಮಾಧವರಾವ್ ಅವರು ಜನಸಂಘದ ಇ.ಸಿ. ರಾಮಣ್ಣ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. 1962ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಇವರು ಪ್ರಜಾ ಸೋಷಿಯಲಿಸ್ಟ್ ಪಕ್ಷದ ಜಿ.ಎಂ. ಚನ್ನಪ್ಪ ಅವರನ್ನು ಸೋಲಿಸಿ ಮತ್ತೆ ವಿಧಾನಸಭೆಗೆ ತೆರಳಿದ್ದರು.
1962ರಲ್ಲಿ ಕಾಂಗ್ರೆಸ್ ಪಕ್ಷವು ತೀರ್ಥಹಳ್ಳಿ ಕ್ಷೇತ್ರದಿಂದ ದಾನಮ್ಮ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಸಂಯುಕ್ತ ಸೋಷಿಯಲಿಸ್ಟ್ ಪಕ್ಷದ ಶಾಂತವೇರಿ ಗೋಪಾಲಗೌಡ ಅವರು ಎದುರು ಸೋಲು ಕಂಡಿದ್ದರು. 1967ರಲ್ಲಿ ದಾನಮ್ಮ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದಾಗ ಇವರು ಪಕ್ಷೇತರರಾಗಿ ಕಣಕ್ಕಿಳಿದು ನಾಲ್ಕನೇ ಸ್ಥಾನ ಗಳಿಸಿದ್ದರು. ಅದೇ ಚುನಾವಣೆಯಲ್ಲಿ ಹೊಸನಗರ ಕ್ಷೇತ್ರದಿಂದ ಕೆ.ಎಂ. ರೇಣುಕಾ ಅವರು ಭಾರತೀಯ ಜನಸಂಘದಿಂದ ಕಣಕ್ಕಿಳಿದು ನಾಲ್ಕನೇ ಸ್ಥಾನ ಗಳಿಸಿದ್ದರು. 1972ರ ಚುನಾವಣೆಯಲ್ಲಿ ಕೆ.ಎಂ. ದಾನಮ್ಮ ಅವರು ತೀರ್ಥಹಳ್ಳಿ ಕ್ಷೇತ್ರದಿಂದ ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆದು ಕಣಕ್ಕಿಳಿದಿದ್ದರು. ಸುಶೀಲಮ್ಮ ಎನ್ಸಿಓ ಅಭ್ಯರ್ಥಿಯಾಗಿದ್ದರು. ಮಹಿಳೆಯರಿಬ್ಬರು ರಾಜಕೀಯ ಪಕ್ಷಗಳ ಟಿಕೆಟ್ ಪಡೆದು ಪರಸ್ಪರ ಎದುರಾಳಿಗಳಾಗಿದ್ದು ಇದೇ ಕೊನೆ. ಈ ಕಣದಲ್ಲಿ ಸೋಷಿಯಲಿಸ್ಟ್ ಪಕ್ಷದ ಕೋಣಂದೂರು ಲಿಂಗಪ್ಪರಿಗೆ ಗೆಲುವಾಗಿತ್ತು.
1972ರಲ್ಲಿ ಹೊಸನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಡಿ.ಬಿ. ಗಂಗಮ್ಮ ಸ್ಪರ್ಧಿಸಿದ್ದರು. 1983ರಲ್ಲಿ ಹೊಳೆಹೊನ್ನೂರು ಮೀಸಲು ಕ್ಷೇತ್ರದಿಂದ ಅಹಲ್ಯಬಾಯಿ ಪಕ್ಷೇತರರಾಗಿ ಸ್ಪರ್ಧಿಸಿ 6ನೇ ಸ್ಥಾನ ಗಳಿಸಿದ್ದರು. 1985ರಲ್ಲಿ ಸುಬ್ಬಲಕ್ಷ್ಮಿ ಪಕ್ಷೇತರರಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. ಇದೇ ವರ್ಷ ಸೊರಬ ಕ್ಷೇತ್ರದಲ್ಲಿ ಗೆದ್ದ ಬಂಗಾರಪ್ಪ ಅವರ ವಿರುದ್ಧ ಕಣದಲ್ಲಿದ್ದುದು ಜನತಾ ಪಕ್ಷದ ಪ್ರಫುಲ್ಲ ಮಧುಕರ್.
ಶಿವಮೊಗ್ಗ ಕ್ಷೇತ್ರದಿಂದ 1994ರಲ್ಲಿ ಪಕ್ಷೇತರ ಅಭ್ಯರ್ಥಿ ಇಂದ್ರಮ್ಮ 7ನೇ ಸ್ಥಾನ ಗಳಿಸಿದ್ದರೆ, 99ರಲ್ಲಿ ಎಐಎಡಿಎಂಕೆ ಪಕ್ಷದ ಎಲ್ಲಮ್ಮ ಎಂಟನೇ ಸ್ಥಾನ ಗಳಿಸಿದ್ದರು. ಹೊಳೆಹೊನ್ನೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಲಲಿತಾ ನಾಯಕ್ ನಾಲ್ಕನೇ ಸ್ಥಾನ ಪಡೆದಿದ್ದರು. 2004ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಇಂದಿರಮ್ಮ, ಹೊಸನಗರ ಕ್ಷೇತ್ರದಿಂದ ಎಸ್.ವಿ. ಅನಿತ ಪಕ್ಷೇತರರಾಗಿ ಕಣಕ್ಕಿಳಿದು 6ನೇ ಸ್ಥಾನ ಗಳಿಸಿದ್ದರು.
2008ರ ವಿಧಾನಸಭೆ ಚುನಾವಣೆಯಲ್ಲಿ ಇಡೀ ಮಲೆನಾಡಿನಲ್ಲಿ ಕಣದಲ್ಲಿದ್ದುದು ಇಬ್ಬರೇ ಮಹಿಳೆಯರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಶಾರದಾ ಪೂರ್ಯಾನಾಯ್ಕ ಕಣದಲ್ಲಿದ್ದರೆ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಯು ಪಕ್ಷದಿಂದ ಮಂಜುಳಾದೇವಿ ಸ್ಪರ್ಧಿಸಿದ್ದರು. ಇಬ್ಬರಿಗೂ ಗೆಲವು ಸಾಧ್ಯವಾಗಿರಲಿಲ್ಲ.
-ಹೊನ್ನಾಳಿ ಚಂದ್ರಶೇಖರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.