ಒಕ್ಕಲಿಗರ ನಾಡಲ್ಲಿ 'ಒಡೆತನ'ಕ್ಕಾಗಿ ಸಮರ
ಕ.ಪ್ರ. ವಾರ್ತೆ ರಾಮನಗರ ಮಾ.23
ರೇಷ್ಮೆನಾಡು ರಾಮನಗರ 4 ಕ್ಷೇತ್ರಗಳನ್ನೊಳಗೊಂಡ ಪುಟ್ಟ ಜಿಲ್ಲೆ. ಒಕ್ಕಲಿಗರ ಶಕ್ತಿ ಕೇಂದ್ರವಾದ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಪ್ರದಾಯಿಕ ಎದುರಾಳಿಗಳು. ಆಡಳಿತಾರೂಢ ಬಿಜೆಪಿಗೆ ಇಲ್ಲಿ ನೆಲೆ ಇಲ್ಲ. ನವಜಾತ ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳ ಸ್ಪರ್ಧೆ ಸಾಂಕೇತಿಕವಷ್ಟೇ.
ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ರಾಮನಗರದಿಂದಲೇ ಗೆದ್ದು ರಾಜ್ಯದ ಚುಕ್ಕಾಣಿ ಹಿಡಿದರು. ರಾಮಕೃಷ್ಣ ಹೆಗಡೆ ಸಿಎಂ ಆದ ಬಳಿಕ ಸದನದ ಸದಸ್ಯರಾಗಲು ಕನಕಪುರದಿಂದ ಸ್ಪರ್ಧಿಸಿ, ಗೆದ್ದಿದ್ದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಈ ಬಾರಿ ಸ್ಪರ್ಧೆ ಖಚಿತ. ಕನಕಪುರದಲ್ಲಿ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಪಿ.ಜಿ.ಆರ್.ಸಿಂಧ್ಯಾ ನಡುವೆ ಕಾಳಗ ಏರ್ಪಟ್ಟಿದೆ. ಮಾಗಡಿಯಲ್ಲಿ ಎಚ್.ಸಿ.ಬಾಲಕೃಷ್ಣ ಮತ್ತೊಂದು ಅಗ್ನಿಪರೀಕ್ಷೆಗೆ ಅಣಿಯಾಗಿದ್ದಾರೆ. ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಪಕ್ಷಾಂತರಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಕ್ಷೇತ್ರಾಂತರಿ ಶಾಸಕಿ ಅನಿತಾ ಕುಮಾರಸ್ವಾಮಿ ಜೆಡಿಎಸ್ ಹುರಿಯಾಳು.
ಅತೃಪ್ತರ ಮನವೊಲಿಕೆ: ಜೆಡಿಎಸ್ ನಾಲ್ಕೂ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಪಕ್ಕಾ ಮಾಡಿದೆ. ಚನ್ನಪಟ್ಟಣ ಹೊರತಾಗಿ ಉಳಿದ 3 ಪೌರ ಸಂಸ್ಥೆಗಳ ಚುನಾವಣೆ ಸೋಲು ದಳಪತಿಗಳನ್ನು ಕಂಗೆಡಿಸಿದೆ. ಸೆಮಿಫೈನಲ್ನಲ್ಲಿ ನಿರೀಕ್ಷೆ ಮೀರಿದ ಗೆಲವಿನಿಂದ ಕಾಂಗ್ರೆಸ್ ಬೀಗುತ್ತಿದೆ. ಕಾಂಗ್ರೆಸ್ನಲ್ಲಿ ಕನಕಪುರ, ರಾಮನಗರ ಜಿಲ್ಲೆಯಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಕ್ರಮವಾಗಿ ಶಿವಕುಮಾರ್, ಮರಿದೇವರು ಮಾತ್ರವೇ ಅರ್ಜಿ ಸಲ್ಲಿಸಿದ್ದಾರೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಇನ್ನೂ ಆತಂಕದಲ್ಲಿದ್ದಾರೆ. ಮಾಗಡಿಯಲ್ಲಿ ಎ.ಮಂಜುನಾಥ್ ಹಾಗೂ ಜೇಡ್ರಳ್ಳಿ ಕೃಷ್ಣಪ್ಪ ನಡುವೆ ತೀವ್ರ ಪೈಪೋಟಿ ಇದೆ. ಹೆಬ್ಬಾಳದಲ್ಲಿ ಟಿಕೆಟ್ ತಪ್ಪಿದರೆ ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾಗಡಿಗೆ ಮರಳುವ ಸಾಧ್ಯತೆ ತಳ್ಳಿ ಹಾಕಲಾಗದು. ಬಿಜೆಪಿಗೆ ಇಲ್ಲಿ ನೆಲೆ ಇಲ್ಲ. ಕೆಜೆಪಿ ಕಟ್ಟಲು ಹೊರಟ ಎಂ.ರುದ್ರೇಶ್, ಖಾತೆ ತೆರೆಯಲಾಗದೆ ಕಂಗೆಟ್ಟಿದ್ದಾರೆ. ಬಿಎಸ್ಆರ್ ಫ್ಯಾನ್ ಇಲ್ಲಿ ಬೀಸುತ್ತಿಲ್ಲ.
ತಾರಕಕ್ಕೇರಿದ ಪ್ರಚಾರ: ರಾಮನಗರದಲ್ಲಿ ಕುಮಾರಸ್ವಾಮಿ ಹೊರತಾಗಿ ಉಳಿದೆಲ್ಲ ಪ್ರಮುಖ ನಾಯಕರ ಪ್ರಚಾರದ ಭರಾಟೆ ತಾರಕಕ್ಕೇರಿದೆ. ಕನಕಪುರದಲ್ಲಿ ಮಾಜಿ ಸಚಿವದ್ವಯರು ಪ್ರಚಾರ ನಡೆಸಿದ್ದರೆ, ಚನ್ನಪಟ್ಟಣದಲ್ಲಿ ಅನಿತಾ-ಯೋಗೇಶ್ವರ್ ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದಾರೆ. ರಾಮನಗರದಲ್ಲಿ ಮರಿದೇವರು ನೀರಿನ ಬವಣೆಯ ಕೂಗು ಕೇಳಿ ಬಂದ ಕಡೆಯಲ್ಲೆಲ್ಲಾ ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ ಕೊರೆಸುತ್ತಿದ್ದಾರೆ. ಮಾಗಡಿಯಲ್ಲಿ ಬಾಲಕೃಷ್ಣ, ಮಂಜುನಾಥ್, ಜೇಡ್ರಳ್ಳಿ ಕೃಷ್ಣಪ್ಪ ಮತಬೇಟೆ ಸರ್ಕಸ್ ನಡೆದಿದೆ.
-ಮತ್ತೀಕೆರೆ ಜಯರಾಮ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.