ಪಕ್ಷದಲ್ಲಿ ಇನ್ನು ತಪ್ಪಿಗೆ ಅವಕಾಶವಿಲ್ಲ: ಜೋಶಿ
ಕ.ಪ್ರ. ವಾರ್ತೆ ಬೆಂಗಳೂರು ಮಾ.23
ಪಕ್ಷದಲ್ಲಿ ಕಳೆದ ನಾಲ್ಕೈದು ವರ್ಷದಿಂದ ಕೆಲ ವ್ಯಕ್ತಿಗಳು ತಪ್ಪೆಸಗಿ ಹೋಗಿದ್ದಾರೆ. ತಪ್ಪುಗಳಿಗೆ ಇನ್ನು ಮುಂದೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಶನಿವಾರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ ನೇಮಕಗೊಂಡ ತಕ್ಷಣ ಕೆಲವರು ನನ್ನನ್ನು ಎಳಸು, ಕೆ.ಎಸ್. ಈಶ್ವರಪ್ಪ ಮನೆ ಮುರುಕ ಎಂದು ಟೀಕಿಸಿದರು. ಆದರೆ ಯಾರು ಮನೆ ಮುರುಕರು, ಯಾರು ಕುಟುಂಬದ ಆಸ್ತಿ ಹೊಡೆಯಲು ಪ್ರಯತ್ನಿಸಿ ದ್ರೋಹ ಮಾಡಿದರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಮಾತ್ರವಲ್ಲ, ನನ್ನ ಮನಸು ಸದಾ ಮಗುವಿನಷ್ಟೇ ಎಳಸಾಗಿದ್ದು, ಕಾರ್ಯಕರ್ತರ ಜತೆ ಬೆರೆತು ಪಕ್ಷ ಕಟ್ಟುತ್ತದೆ ಎಂದು ಹೇಳಿದರು.
ನಾನು ರಾಜ್ಯಾಧ್ಯಕ್ಷನಾಗುತ್ತೇನೆಂದು ಕನಸು ಕಂಡಿರಲಿಲ್ಲ. ಈಗ ನನ್ನನ್ನು ದುರ್ಬಲ ಎನ್ನುತ್ತಾರೆ. ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ನಿಂತಾಗಲೂ ಹೀಗೆ ಹೇಳಿದ್ದರು. ಆಗ ನಾನು 80 ಸಾವಿರ ಮತಗಳ ಅಂತರದಿಂದ ಗೆದ್ದೆ. ಕಳೆದ ಐದು ವರ್ಷದಿಂದ ಪಕ್ಷದಲ್ಲಿ ಯಾವುದೋ ಒಬ್ಬ ವ್ಯಕ್ತಿಯನ್ನು ತೃಪ್ತಿಪಡಿಸುವುದಕ್ಕೆ ಸಮಯ ಕಳೆದವು. ಇನ್ನು ಮುಂದೆ ಅಂಥ ಸನ್ನಿವೇಶ ಸೃಷ್ಟಿಯಾಗುವುದಿಲ್ಲ. ಇದು ನಮ್ಮ ಮನೆ ಎಂಬ ಭಾವನೆಯಿಂದ ಕೆಲಸ ಮಾಡೋಣ ಎಂದು ಹೇಳಿದರು.
ಪಕ್ಷ ಸಿಬಿಐ ತನಿಖೆಯಿಂದ ದೂರ: ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕಳೆದ ಐದು ವರ್ಷದಿಂದ ರಾಜ್ಯ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡುತ್ತಲೇ ಬಂದಿದೆ. ಆದರೆ ಇದೇ ಅವಧಿಯಲ್ಲಿ ನಮ್ಮನ್ನು ಡಿನೋಟಿಫಿಕೇಶನ್ ಹಾಗೂ ಅಕ್ರಮ ಗಣಿಗಾರಿಕೆ ಹಗರಣ ಆವರಿಸಿಕೊಂಡಿತು. ಈಗ ಅದೆಲ್ಲದರಿಂದಲೂ ನಾವು ಹೊರತಾಗಿದ್ದೇವೆ. ಪಕ್ಷ ಸಿಬಿಐ ತನಿಖೆಯಿಂದ ದೂರವಾಗಿದೆ. ಮೂಲ ಬಿಜೆಪಿ ಯಾವ ರೀತಿ ಇರಬೇಕಿತ್ತೋ ಹಾಗಿದೆ ಎಂದು ಯಡಿಯೂರಪ್ಪ ವಿರುದ್ಧ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಅಂದಿನ ಸಂದರ್ಭದಲ್ಲಿ ಇದನ್ನೆಲ್ಲ ಸಹಿಸಿಕೊಳ್ಳುವುದು ನಮಗೆ ಅನಿವಾರ್ಯವಾಗಿತ್ತು. ಬೇರೆ ವಿಧಿ ಇರಲಿಲ್ಲ. ಈಗ ಹೊಲಸೆಲ್ಲ ಹೊರಗೆ ಹೋಗಿ ಪಕ್ಷ ಶುಭ್ರವಾಗಿದೆ. ಇನ್ನು ಮುಂದೆ ವಾಜಪೇಯಿ ಆದರ್ಶದ ಆಡಳಿತ ನೀಡುವುದೇ ನಮ್ಮ ಗುರಿ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ನವರು ರಾಜಕಾರಣ ಮಾಡುತ್ತಾರೆ. ಅವರ ಅಪ್ಪನಂಥ ರಾಜಕಾರಣ ಮಾಡುವುದು ನಮಗೂ ಗೊತ್ತು.ಅಧಿಕಾರ ಕೈಗೆ ಬಂದಿದೆ ಎಂಬ ಭ್ರಮೆಯಲ್ಲಿ ಹೊಸ ಜುಬ್ಬಾ- ಕೋಟು ಹೊಲಿಸಿಕೊಂಡಿರುವ ಅವರು, ರಾಜ್ಯದ ಸಲುವಾಗಿ ಒಂದಾದರೂ ಹೋರಾಟ ಮಾಡಿದ್ದಾರೆಯೇ ? ಬೆಂಗಳೂರಿನಿಂದ ಬಳ್ಳಾರಿವರೆಗೆ ಡ್ಯಾನ್ಸ್ ಮಾಡಿಕೊಂಡು ಹೋಗಿದ್ದನ್ನು ಬಿಟ್ಟರೆ ಅವರಿಂದ ಜನಪರ ಹೋರಾಟ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ಕುಮಾರ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ, ಸಚಿವ ಗೋವಿಂದ ಕಾರಜೋಳ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.