ಬಿಎಸ್ಆರ್ ಚುನಾವಣಾ ಸಮಿತಿಗೆ ಮಾಜಿ ಸಂಸದ ವಿರುಪಾಕ್ಷಪ್ಪ ಅಧ್ಯಕ್ಷ
ಕ.ಪ್ರ. ವಾರ್ತೆ ಬೆಂಗಳೂರು ಮಾ.23
ಬಿಎಸ್ಆರ್ ಕಾಂಗ್ರೆಸ್ ನೂತನ ಚುನಾವಣಾ ಸಮಿತಿಯನ್ನು ಶನಿವಾರ ಬಿಡುಗಡೆಗೊಳಿಸಿತು.
ಸಮಿತಿಗೆ ಮಾಜಿ ಸಂಸದ ವಿರುಪಾಕ್ಷಪ್ಪ ಅವರು ಅಧ್ಯಕ್ಷರಾಗಿದ್ದು ವಿವಿಧ ಜಿಲ್ಲೆಗಳ 9 ಮುಖಂಡರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಸಂಬಂಧ ಬೆಂಗಳೂರಿನ ಬಿಎಸ್ಆರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಮದನ್ ಪಟೇಲ್, ವಿಧಾನಸಭಾ ಚುನಾವಣೆಗೆ ಬಿಎಸ್ಆರ್ ಪಕ್ಷ ಇತರ ರಾಜಕೀಯ ಪಕ್ಷಗಳಿಗಿಂತ ವೇಗವಾಗಿ ಸಿದ್ಧತೆಮಾಡಿಕೊಂಡಿದ್ದು ಈಗಾಗಲೇ 27 ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆಗೊಳಿಸಿದೆ ಎಂದು ತಿಳಿಸಿದರು.
ಅಲ್ಲದೇ ಮಾ.27 ಅಥವಾ 28 ರಂದು ಮತ್ತೊಂದು ಪಟ್ಟಿ ಬಿಡಗಡೆಗೊಳಿಸುವುದಾಗಿ ಹೇಳಿದರು. ಇತರ ಪಕ್ಷಗಳ ಕಾರ್ಯಕರ್ತರು ಬಿಎಸ್ಆರ್ಗೆ ಬರುವಂತಿದ್ದರೆ ಅವರನ್ನು ಸ್ವಾಗತಿಸುವುದಾಗಿ ಹೇಳಿದರು.
ಇದೇ ವೇಳೆ ಮಾತನಾಡಿದ ಕಾರ್ಯದರ್ಶಿ ಎನ್.ರೇಣುಕಾಪ್ರಸಾದ್, ಚುನಾವಣಾ ಪ್ರಣಾಳಿಕೆ ಸಮಿತಿ, ಶಿಸ್ತು ಸಮಿತಿಗಳನ್ನು ರಚಿಸಲಾಗಿದ್ದು ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗಿದೆ. ಇದು ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಆರ್ ಉತ್ತಮ ಸಾಧನೆ ಮಾಡಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ ನೂರಾರು ಮುಖಂಡರು ಹಾಗೂ ಕಾರ್ಯಕರ್ತರನ್ನು ಮದನ್ ಪಟೇಲ್ ಪಕ್ಷಕ್ಕೆ ಬರಮಾಡಿಕೊಂಡರು.
ಚುನಾವಣಾ ಸಮಿತಿ : ವಿರುಪಾಕ್ಷಪ್ಪ ಅಧ್ಯಕ್ಷರು, ಸೋಮಶೇಖರ್ ರೆಡ್ಡಿ, ಸಿರಾಜ್ ಶೇಖ್, ಶಿವಪ್ಪ, ರೇಣುಕಾ ಪ್ರಸಾದ್, ಖಾಲಿದ್ ಅಹಮದ್, ವೈ,ಎನ್.ಗೌಡರ್, ಶಿವಪುತ್ರಪ್ಪ ದೇಸಾಯಿ, ಮದನ್ ಪಟೇಲ್, ಅಲಂ ಚನ್ನಪ್ಪ ಹಾಗೂ ಜಿಗಣಿ ಶಂಕರ್ ಚುನಾವಣಾ ಸಮಿತಿ ಸದಸ್ಯರಾಗಿದ್ದಾರೆ.
ಖಂಡನೆ: ಬಳ್ಳಾರಿಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿರುವ ಜಿಲ್ಲಾಧಿಕಾರಿಗಳ ಕ್ರಮ ಖಂಡಿಸಿ ಶ್ರೀರಾಮುಲು ನಡೆಸುತ್ತಿದ್ದ ಪ್ರತಿಭಟನೆಯನ್ನು ಪೊಲೀಸ್ ಬಲದ ಮೂಲಕ ಜಿಲ್ಲಾಧಿಕಾರಿಗಳು ಹತ್ತಿಕ್ಕುತ್ತಿರುವುದು ಖಂಡನಾರ್ಹ ಎಂದು ಮದನ್ ಪಾಟೇಲ್ ಹೇಳಿದರು.
ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ರಾಮುಲು ಅವರ ಬಟ್ಟೆ ಹರಿದು ಅವಮಾನಿಸಲಾಗಿದೆ. ಅಲ್ಲದೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಬಿಎಸ್ಆರ್ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಪ್ರತಿಭಟನೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಮದನ್ ಪಟೇಲ್ ಹೇಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.