ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ
ಕ.ಪ್ರ. ವಾರ್ತೆ ಬೆಂಗಳೂರು ಮಾ.23
ಅಭಿವೃದ್ಧಿ ಹರಿಕಾರರಾದ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರೇರಣೆ, ನರೇಂದ್ರ ಮೋದಿ ಅವರ ನಿದರ್ಶನದೊಂದಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ಕುಮಾರ್ ತಿಳಿಸಿದ್ದಾರೆ.
ನೂತನ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಎರಡೇ ಚಟುವಟಿಕೆ ನಡೆಯುತ್ತಿದೆ. ಒಂದು ಅಭಿವೃದ್ಧಿ, ಇನ್ನೊಂದು ಅಪಪ್ರಚಾರ. ಕಳೆದ ಐವತ್ತು ವರ್ಷಗಳಲ್ಲಿ ಮಾಡಲಾಗದ ಅಭಿವೃದ್ಧಿ ಕೆಲಸಗಳನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದ್ದರೂ ಸಲ್ಲದ ಅಪಪ್ರಚಾರನಡೆಸಲಾಗುತ್ತಿದೆ ಎಂದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧವೂ ಹೀಗೆ ನಿರಂತರ ಅಪಪ್ರಚಾರ ನಡೆಯುತ್ತಿತ್ತು. ಆದರೂ ಅವರು ಅಭಿವೃದ್ಧಿಯ ಬೆಳಕು ಎಂಬುದು ಇಡಿ ಜಗತ್ತಿಗೆ ಗೊತ್ತಾಗಿದೆ ಎಂದರು.
ರಾಜ್ಯ ಕಾಂಗ್ರೆಸ್ಗೆ ಸ್ಪಷ್ಟತೆ ಇಲ್ಲ. ಅವರಿಗೆ ನಾಯಕ ಯಾರು ಎಂಬುದೇ ಗೊತ್ತಿಲ್ಲ. ಆಟ ಮುಗಿದ ಮೇಲೆ ನಾಯಕನ ಆಯ್ಕೆ ಮಾಡುವುದು ಅವರ ಸಂಪ್ರದಾಯ. ಆದರೆ ಬಿಜೆಪಿಗೆ ಸ್ಪಷ್ಟತೆ ಇದೆ. ಆ ಕಾರಣಕ್ಕಾಗಿಯೇ ಜಗದೀಶ್ ಶೆಟ್ಟರ್ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ಬಿಜೆಪಿಗೆ ಕಾಂಗ್ರೆಸ್ ನೇರ ಎದುರಾಳಿ. ಈಗ ಹುಟ್ಟಿರುವ ಹೊಸ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ. ಆಕಾಶದಿಂದ ಹಿಡಿದು ಭೂಮಿಯವರೆಗೆ ನುಂಗಿ ನೀರು ಕುಡಿದಿರುವ ಕಾಂಗ್ರೆಸ್ನಲ್ಲಿ ಎಷ್ಟು ಹೋಳುಗಳಿವೆ ಎಂಬುದು ಇನ್ನು ಕೆಲವೇ ದಿನಗಳಲ್ಲಿ ಸ್ಪಷ್ಟವಾಗುತ್ತದೆ ಎಂದು ಲೇವಡಿಯಾಡಿದರು.
ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಜೆಡಿಎಸ್ನಲ್ಲಿ ಯಾವುದಾದರೂ ಉನ್ನತ ಹುದ್ದೆ ಅಲಂಕರಿಸಬೇಕಿದ್ದರೆ ಆ ಕುಟುಂಬದಲ್ಲಿ ಹುಟ್ಟಬೇಕು.ಕಾಂಗ್ರೆಸ್ನಲ್ಲಿ ಬೇರೆ ಬೇರೆ ಸಿದ್ದ ಸೂತ್ರಗಳಿವೆ. ಆದರೆ ಒಬ್ಬ ಸಾಮಾನ್ಯ ಕಾರ್ಯಕರ್ತ ಉನ್ನತ ಹುದ್ದೆ ಏರುವ ಅವಕಾಶ ಇರುವುದು ಬಿಜೆಪಿಯಲ್ಲಿ ಮಾತ್ರ ಎಂದು ಅಭಿಪ್ರಾಯಪಟ್ಟರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.