8,200 ವ್ಯಯಿಸಿ ಗೆದ್ದಿದ್ದ ಕೋಣಂದೂರು ಲಿಂಗಪ್ಪ!
1972ರ ಚುನಾವಣೆ ಕಾಲ. ಸೋಷಿಯಲಿಸ್ಟ್ ಪಕ್ಷದಿಂದ ತೀರ್ಥಹಳ್ಳಿ ಕ್ಷೇತ್ರದಲ್ಲಿ ಶಾಂತವೇರಿ ಗೋಪಾಲಗೌಡರೇ ನಿಲ್ಲುತ್ತಾರೆಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಬೇರೆ ಅಭ್ಯರ್ಥಿಯನ್ನೇ ಹುಡುಕಬೇಕಿತ್ತು. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರೂ ಒಪ್ಪದಿದ್ದಾಗ ಕೋಣಂದೂರು ಲಿಂಗಪ್ಪ ಅವರನ್ನು ಕಣಕ್ಕಿಳಿಸಲಾಯಿತು. ಇವರು ನಾಮಪತ್ರ ಸಲ್ಲಿಕೆಯ ನಂತರ ಬೆಂಗಳೂರು ಆಸ್ಪತ್ರೆಯಲ್ಲಿದ್ದ ಶಾಂತವೇರಿ ಗೋಪಾಲಗೌಡರ ಆಶೀರ್ವಾದ ಪಡೆಯಲು ಬಂದರು. ಗೋಪಾಲಗೌಡರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆಗ ಕೋಣಂದೂರು ಲಿಂಗಪ್ಪ ಅವರು ಹಾಸಿಗೆಯ ಮೇಲೆಯೇ ಇದ್ದ ಗೋಪಾಲಗೌಡರ ಹಸಿರು ಮಫ್ಲರ್ ತೆಗೆದುಕೊಂಡು ಬಂದರು.
ತೀರ್ಥಹಳ್ಳಿಯಲ್ಲಿ ಇವರಿಗೆ ಎದುರಾಳಿಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ದಾನಮ್ಮ. ಆರಂಭದಲ್ಲಿ ಪ್ರಚಾರ ಸಭೆ ಆಯೋಜಿಸಿದಾಗ ಸೋಷಿಯಲಿಸ್ಟ್ ಪಕ್ಷದ ಸಭೆಗೆ ಯಾರೂ ಬರುತ್ತಿರಲಿಲ್ಲ. ಕೋಣಂದೂರು ಲಿಂಗಪ್ಪ, ಪೂರ್ಣಚಂದ್ರ ತೇಜಸ್ವಿ, ಕಡಿದಾಳು ಶಾಮಣ್ಣ, ಹುಗಲವಳ್ಳಿ ಸುರೇಂದ್ರ ಮತ್ತಿತರನ್ನು ಬಿಟ್ಟರೆ ಯಾರೊಬ್ಬರೂ ವೇದಿಕೆ ಮುಂದೆ ಇರುತ್ತಿರಲಿಲ್ಲ. ಜನರಿಲ್ಲದ ಎಷ್ಟೋ ಸಭೆಗಳು ನಡೆದವು. ಆದರೆ ಕೋಣಂದೂರು ಲಿಂಗಪ್ಪ ಅವರು ತಮ್ಮ ಭಾಷಣದಲ್ಲಿ ಗೋಪಾಲಗೌಡರ ಮಫ್ಲರ್ ಎತ್ತಿ ತೋರಿಸಿ ನನಗೆ ಗೌಡರು ಆಶೀರ್ವದಿಸಿ ಕಳಿಸಿಕೊಟ್ಟಿದ್ದಾರೆ ಎನ್ನುವುದನ್ನು ಮರೆಯುತ್ತಿರಲಿಲ್ಲ. ಇದು ಫಲ ನೀಡಲಾರಂಭಿಸಿತು. ಮತದಾನ ಹತ್ತಿರವಾಗುತ್ತಿದ್ದಂತೆ ಜನರು ಸಭೆಗೆ ಬರತೊಡಗಿದರು.
ಈ ನಡುವೆ ಸೋಷಿಯಲಿಸ್ಟ್ ಪಕ್ಷದಲ್ಲಿ ಹಣವೇ ಇರುತ್ತಿರಲಿಲ್ಲ. 'ಒಂದು ಓಟಿನ ಜತೆ ಒಂದು ನೋಟು ಕೊಡಿ' ಎಂದು ಮತದಾರರಿಂದಲೇ ಹಣ ಸಂಗ್ರಹಿಸಲು ಶುರು ಮಾಡಿದರು. ಹತ್ತು ಸಾವಿರದಷ್ಟು ಹಣ ಸಂಗ್ರಹವಾಗಿತ್ತು. ಕೋಣಂದೂರು ಲಿಂಗಪ್ಪರಿಗೆ ಗೆಲವೂ ಸಿಕ್ಕಿತ್ತು. ಇಡೀ ಚುನಾವಣೆಗೆ 8,200 ಖರ್ಚಾಗಿತ್ತು. ಹಿಂದಿನ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರು ಪ್ರಚಾರ ಸಂದರ್ಭದಲ್ಲಿ ಮಾಡಿದ್ದ ಪೆಟ್ರೋಲ್ ಸಾಲ ತೀರಿಸಿಯೂ ಸುಮಾರು 1500 ಉಳಿದಿತ್ತು. ಉಳಿದ ಹಣವನ್ನು ಗೌಡರ ಚಿಕಿತ್ಸೆಗೆ ಕೊಡಬೇಕೆಂದು ಎಲ್ಲರ ಆಸೆಯಾಗಿತ್ತು. ಆದರೆ ಅಂಥ ಅನಾರೋಗ್ಯದ ಸ್ಥಿತಿಯಲ್ಲಿಯೂ ಅವರು ಹಣ ಪಡೆಯಲು ನಿರಾಕರಿಸುತ್ತಾರೆ ಎಂದು ಗೊತ್ತಿತ್ತು. ಹಾಗಾಗಿ ಬೆಂಗಳೂರು ಆಸ್ಪತ್ರೆಗೆ ಹೋಗಿ ಅವರನ್ನು ಭೇಟಿ ಮಾಡಿದಾಗ ಗೌಡರಿಗೆ ಗೊತ್ತಾಗದಂತೆ ಅವರ ಹಾಸಿಗೆ ಅಡಿ ಈ ಹಣವನ್ನು ಇಟ್ಟು ಬಂದಿದ್ದರು.
- ಹೊನ್ನಾಳಿ ಚಂದ್ರಶೇಖರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.