ಕ.ಪ್ರ. ವಾರ್ತೆ ಬೆಂಗಳೂರು ಮಾ.28-
ಕಳಂಕಿತರಿಗೆ ಟಿಕೆಟ್ ಇಲ್ಲ!
ರಾಜ್ಯ ಬಿಜೆಪಿ ಕೈಗೊಂಡಿರುವ ಈ ತೀರ್ಮಾನವೇ ಇದೀಗ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸ್ವಲ್ಪ ಗೊಂದಲಕ್ಕೆ ಕಾರಣವಾಗಿದೆ.
ಜಗಳಗಂಟರು, ಕಳಂಕಿತರು ಪಕ್ಷ ತೊರೆದಿದ್ದಾರೆ. ಇದೀಗ ಬಿಜೆಪಿ ಸ್ವಚ್ಛವಾಗಿದೆ ಎಂದು ಹೇಳುತ್ತಿರುವ ರಾಜ್ಯ ಮುಖಂಡರು ಅದರಂತೆ ನಡೆದುಕೊಳ್ಳಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ಒಂದು ಬಾರಿ ಜೈಲಿಗೆ ಹೋಗಿ ಬಂದವರಿಗೆ ಟಿಕೆಟ್ ನೀಡುವುದು ಬೇಡ ಎಂದು ಯೋಚಿಸುತ್ತಿದ್ದಾರೆ.
ಒಂದು ವೇಳೆ ಮುಖಂಡರ ಈ ಯೋಚನೆ ಕಾರ್ಯರೂಪಕ್ಕೆ ಬಂದರೆ ಹೆಬ್ಬಾಳ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು, ಕೆಜಿಎಫ್ ಶಾಸಕ ವೈ. ಸಂಪಂಗಿ ಮತ್ತು ಮಾಲೂರು ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶ ಸಿಗುವುದಿಲ್ಲ.
ಈ ಪೈಕಿ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಕೃಷ್ಣಯ್ಯ ಶೆಟ್ಟಿ ಅವರ ಮೇಲಿನ ಆರೋಪಗಳು ಸಾಬೀತಾಗದ ಕಾರಣ ಅವರಿಗೆ ಅವಕಾಶ ನೀಡಬೇಕು ಎಂಬ ಮಾತು ಕೇಳಿಬರುತ್ತಿದೆ. ಅದಕ್ಕಿಂತ ಮುಖ್ಯವಾಗಿ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಕೃಷ್ಣಯ್ಯ ಶೆಟ್ಟಿ ಅವರನ್ನು ಗೆಲ್ಲುವ ಅಭ್ಯರ್ಥಿಗಳು ಎಂದು ಪರಿಗಣಿಸಲಾಗಿದೆ. ಜತೆಗೆ ಆರ್ಥಿಕವಾಗಿಯೂ ಪಕ್ಷಕ್ಕೆ ನೆರವಾಗುತ್ತಾರೆ. ಈ ಕಾರಣಕ್ಕಾಗಿಯಾದರೂ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಪಕ್ಷದ ಒಂದು ವಲಯದಲ್ಲಿ ವ್ಯಕ್ತವಾಗಿದೆ.
ಆದರೆ, ಅಧೀನ ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಗಾಗಿರುವ ವೈ. ಸಂಪಂಗಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಲಾಗಿದೆ.
ಈ ಗೊಂದಲ ಇರುವುದರಿಂದಾಗಿ ಶೇ.60ಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡರೂ ಅಂತಿಮ ಪಟ್ಟಿ ಪ್ರಕಟಿಸುವುದನ್ನು ವಿಳಂಬ ಮಾಡಲಾಗುತ್ತಿದೆ. ಜತೆಗೆ ಕೆಜೆಪಿ ಸೇರುವವರು, ಪಕ್ಷೇತರರಾಗಿ ಸ್ಪರ್ಧಿಸುವವರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನೂ ಒಟ್ಟಾಗಿ ಪ್ರಕಟಿಸಲು ನಿರ್ಧರಿಸಲಾಗಿದೆ.
ಇತರರ ಬಗ್ಗೆ ಕ್ರಮ ಇಲ್ಲ: ಕೇವಲ ಜೈಲಿಗೆ ಹೋಗಿ ಬಂದವರಿಗೆ ಮಾತ್ರ ಟಿಕೆಟ್ ಬೇಡ ಎಂದು ಹೇಳಲಾಗುತ್ತಿದೆಯೇ ವಿನಃ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಇತರೆ ಶಾಸಕರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಚಿವ ಸಿ.ಟಿ. ರವಿ ಸೇರಿದಂತೆ ಅನೇಕ ಸಚಿವ, ಶಾಸಕರ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ದೂರು ದಾಖಲಾಗಿವೆ. ಅವುಗಳಲ್ಲಿ ಬಹುತೇಕ ದೂರುಗಳು ದುರುದ್ದೇಶದಿಂದ ಕೂಡಿವೆ. ಹೀಗಾಗಿ ಕೇವಲ ಆರೋಪ ಎದುರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ದೂರವಿಡುವುದು ಸರಿಯಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜಿಲ್ಲಾ ಪಟ್ಟಿಗೆ ಆದ್ಯತೆ: ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಿಲ್ಲದಂತೆ ನೋಡಿಕೊಳ್ಳಲು ಜಿಲ್ಲಾ ಕೋರ್ ಕಮಿಟಿಗಳು ಕಳುಹಿಸಿಕೊಟ್ಟ ಅಭ್ಯರ್ಥಿಗಳ ಹೆಸರನ್ನೇ ಅಂತಿಮಗೊಳಿಸಲು ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳೆದ (2008) ವಿಧಾನಸಭೆ ಚುನಾವಣೆ ಹೊರತುಪಡಿಸಿ ಉಳಿದಂತೆ ಹಿಂದಿನ ಎಲ್ಲಾ ಚುನಾವಣೆಗಳಲ್ಲೂ ಇದೇ ಪದ್ಧತಿ ಅನುಸರಿಸಲಾಗುತ್ತಿತ್ತು.
ಜಿಲ್ಲಾ ಕೋರ್ ಕಮಿಟಿ ಕಳುಹಿಸಿಕೊಟ್ಟ ಪಟ್ಟಿಯನ್ನು ರಾಜ್ಯ ಸಮಿತಿಯ ಮುಂದೆ ಇಟ್ಟು ಚರ್ಚಿಸಲಾಗುವುದು. ಈ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಹೆಸರು ಬಂದರೆ ಮಾತ್ರ ಸ್ಥಳೀಯ ಮಟ್ಟದಲ್ಲಿ ನಡೆಸಿದ ಸಮೀಕ್ಷೆ ಆಧರಿಸಿ ಒಂದು ಹೆಸರನ್ನು ಅಂತಿಮಗೊಳಿಸಲಾಗುವುದು. ಇಲ್ಲದೇ ಇದ್ದರೆ ಜಿಲ್ಲಾ ಸಮಿತಿ ಕಳುಹಿಸಿಕೊಟ್ಟ ಹೆಸರನ್ನೇ ಅಂತಿಮಗೊಳಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ರಾಜ್ಯ ನಾಯಕರಲ್ಲೂ ಗೊಂದಲ ಉಂಟಾಗದಂತೆ ಪಕ್ಷದ ಚುನಾವಣಾ ಸಮಿತಿಯಲ್ಲಿರುವ ಸದಸ್ಯರ ಭಾಗಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಅವಕಾಶವನ್ನು ಆ ಮುಖಂಡರಿಗೆ ನೀಡಲಾಗಿದೆ. ಅಂದರೆ, ಉತ್ತರ ಕರ್ನಾಟಕ ಭಾಗವಾದರೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅನಂತಕುಮಾರ್, ಪ್ರಹ್ಲಾದ ಜೋಶಿ, ಗೋವಿಂದ ಕಾರಜೋಳ, ಹಳೇ ಮೈಸೂರು ಭಾಗದಲ್ಲಿ ಆರ್. ಅಶೋಕ, ಎಸ್.ಎ. ರಾಮದಾಸ್, ಕರಾವಳಿ ಭಾಗದಲ್ಲಿ ಸದಾನಂದಗೌಡ, ಮಲೆನಾಡು ಭಾಗದಲ್ಲಿ ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ ಅವರು ಸ್ಥಳೀಯ ಪರಿಸ್ಥಿತಿ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.