ನವದೆಹಲಿ: ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿಯ ನಿರ್ಣಾಯಕ ಸಭೆ ಶನಿವಾರ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸಲಾಗುತ್ತದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಉಪಾಧ್ಯಕ್ಷ ರಾಹುಲ್ ಗಾಂಧಿ, ಸಮನ್ವಯ ಸಮಿತಿ ಅಧ್ಯಕ್ಷ ಎ.ಕೆ.ಆ್ಯಂಟನಿ, ಸ್ಕ್ರೀನಿಂಗ್ ಕಮಿಟಿಯಲ್ಲಿರುವ ಲುಸಿನೋ ಫೆಲೆರೋ, ಜಿತೇಂದ್ರ ಸಿಂಗ್, ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ ಹಾಗೂ ಮಧುಸೂದನ್ ಮಿಸ್ತ್ರಿ ಅವರೂ ಪಾಲ್ಗೊಳ್ಳಲಿದ್ದಾರೆ.
ಗುರುವಾರ ನಡೆದ ಸಭೆಯಲ್ಲಿ ಪ್ರಸ್ತಾಪವಾದ ಹಲವು ಅಂಶಗಳು, ಮಹಿಳೆಯರು ಮತ್ತು ಯುವಕರಿಗೆ ಪ್ರಾತಿನಿಧ್ಯ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಿಲ್ಲವೆಂಬ ಆಕ್ಷೇಪ ಮತ್ತು ಯುವಕರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲವೆಂಬ ದೂರುಗಳ ಹಿನ್ನೆಲೆಯಲ್ಲಿ ಶುಕ್ರವಾರವೂ ಸ್ಕ್ರೀನಿಂಗ್ ಕಮಿಟಿ ಸಭೆ ಸೇರಿ ಚರ್ಚಿಸಿದೆ. ಪ್ರತಿ ಜಿಲ್ಲೆಗೊಬ್ಬ ಮಹಿಳೆಯರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಮಹಿಳಾ ಕಾಂಗ್ರೆಸ್ಸಮಿತಿಯಿಂದ ಸಲ್ಲಿಕೆಯಾಗಿದ್ದರೆ, ಕನಿಷ್ಠ 20 ಕ್ಷೇತ್ರಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಾತಿನಿಧ್ಯ ನೀಡಬೇಕೆಂದು ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಮನವಿ ಮಾಡಿದ್ದಾರೆ.
ಪಟ್ಟಿ ಪರಿಷ್ಕರಣೆ: ಶುಕ್ರವಾರ ಅನೌಪಚಾರಿಕವಾಗಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಚುನಾವಣಾ ಸಮಿತಿ ವಿಧಿಸಿದ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಂಡು ಸಿದ್ಧವಾಗಿದ್ದ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಈ ಪರಿಷ್ಕರಿತ ಪಟ್ಟಿಯನ್ನು ಚುನಾವಣಾ ಸಮಿತಿ ಸಭೆಯಲ್ಲಿಟ್ಟು, ಚರ್ಚಿಸಿ ಅಂತಿಮವಾಗಿ ಅನುಮೋದನೆ ನೀಡಲಾಗುತ್ತದೆ. ಶುಕ್ರವಾರವೂ ಟಿಕೆಟ್ ಹಂಚಿಕೆ ಸಂಬಂಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರ ನಡುವೆ ಇದ್ದ ಅಸಮಾಧಾನ ನಿವಾರಿಸುವ ಕಾರ್ಯವೂ ನಡೆದಿದೆ.
ಕೃಷ್ಣ- ಸೋನಿಯಾ ಭೇಟಿ
ವಿದೇಶಾಂಗ ಖಾತೆ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರು ಸಂಜೆ ಸೋನಿ ಯಾಗಾಂಧಿ ಅವರನ್ನು ಭೇಟಿ ಮಾಡಿ ಒಂದು ತಾಸು ಮಾತುಕತೆ ನಡೆಸಿದರು. ಗುರುವಾರ ನಡೆದ ಚುನಾವಣಾ ಸಮಿತಿಯಲ್ಲಿ ಪ್ರಸ್ತಾಪವಾದ ಮಾನದಂಡಗಳು, ಪ್ರಚಾರ ಮತ್ತು ಪ್ರಣಾಳಿಕೆ ಕುರಿತಂತೆ ಮಾತುಕತೆ ನಡೆಸಲಾಗಿದೆ. ಇದೇ ವೇಳೆ ಹಿರಿಯ ನಾಯಕರ ನಡುವೆ ಎದ್ದಿರುವ ಅಸಮಾಧಾನವನ್ನು ಸೌಹಾರ್ದಯುತವಾಗಿ ನಿವಾರಿಸಿ ಸುಗಮವಾಗಿ ಚುನಾವಣೆ ಎದುರಿಸುವ ಮಾರ್ಗೋಪಾಯಗಳ ಬಗ್ಗೆಯೂ ಸೋನಿಯಾಗಾಂಧಿ ಸಲಹೆ ಕೇಳಿದರೆಂದು ತಿಳಿದು ಬಂದಿದೆ. ಪ್ರಬಲ ಕೋಮುಗಳಿಗೆ ಹೆಚ್ಚಿನ ಆದ್ಯೆತ ನೀಡುವ ಬದಲು ಸಾಮಾಜಿಕ ನ್ಯಾಯ ಒದಗಿಸುವುದಕ್ಕೆ ಒತ್ತು ಕೊಡುವ ಅಗತ್ಯ ಮತ್ತು ಅದು ಕರ್ನಾಟಕದಲ್ಲಿ ಫಲ ನೀಡಬಹುದೇ ಎಂಬುದರ ಬಗ್ಗೆಯೂ ಸಮಾಲೋಚಿಸಿದರು ಎನ್ನಲಾಗಿದೆ.