ಸೀಮಕ್ಕಗ ಜೈ.. ಮಸೂತಿಗೆ ಜೈ ಅಂತಾ ಮನಿ ಮುಂದ ಮಂದಿ ಕೂಗುದು ಕೇಳಿ ಅಡಗಿ ಮನ್ಯಾಗಿದ್ದ 'ಮಸೂತಿ ಮೇಡಮ್' ಹೋರಗ್ ಬಂದ್ರು. 'ಲೇ ನಿಮ್ಮಾಪ್ರ.. ಹಂಗ್ಯಾಕ್ ಬಾಯ್ ಬಾಯ್ ಬಡ್ಕೋಳಾಕತ್ತೀರಿ? ಏನಾಗೈತಿ ನಿಮ್ಗ? ಅಂತಾ ಬ್ಯಾನಿ' ಅಂದ್ರು. 'ಏ.. ಬಿಟ್ತನಕ್ಕ.. ಬಿಜೆಪ್ಯಾಗ ಹಾಲಿ ಎಂಎಲ್ಎಗೆ ಟಿಕಿಟ್ ಗ್ಯಾರಂಟಿ ಅಂದಮ್ಯಾಲ್ ನಿಮ್ಗ ಈ ಸರೇನೂ ಟಿಕಿಟ್ ಪಕ್ಕಾ ಆಕೈತಿ ಅಂತ ಸುದ್ದಿ ಗೊತ್ತಾಗಿ ಜೈಕಾರ ಹಾಕಾಕಂತ ಬಂದ್ರ, ನೀನ್ ಒದ್ದು ಓಡ್ಸಾಕತ್ತಿಯಲ್ಲ ಇದ್ ಚಲೋ ಅಲ್ಲ ಬಿಡ್'. 'ಲೇ ಮಂಗ್ಯಾನ್ ಮಕ್ಳ.. ಧಾರವಾಡ ಕ್ಷೇತ್ರದಾಗಾ ನನ್ನ ಬಿಟ್ ಬಿಜೆಪ್ಯಾಗ್ ಸೆಡ್ ಹೊಡೆ ಗಂಡುಸ್ರು ಯಾರ್ ಅದಾಲ್ರೆ? ಶೆಟ್ಟರ್ ಟಾಪು, ಬಾಟಂ ನಾನ್. ಅದ್ಕ ನನ್ಗ ಟಿಕಿಟ್ ಸಿಕ್ಕ ಸಿಗತೈತಿ. ಆದ್ರ ನಾನೀಗ ಕ್ಯಾನ್ವಾಸ್ ಶುರು ಮಾಡಂಗಿಲ್ಲ. ಇಷ್ಟ ದೌಡ ನಿಮ್ಗ ರೊಕ್ಕಾ ಅಂತೂ ಮೊದ್ಲ ಕೊಡಂಗಿಲ್ಲ. 'ಕತ್ಲ ರಾತ್ರಿ' ಆಜುಬಾಜು ಬರ್ರಿ ಆವಾಗ ಕೊಡತೈನಿ.. ಈಗ ನಡಿಲ್ರೇ ಅಂದ್ರು ಮೇಡಂ. ಅಲ್ಬೇ ಯಕ್ಕಾ... ಹೋದ್ಸಲ ಎಂಎಲ್ಎ ಆಗಾಕ ನೀನೆಲ್ಲಿ ಖರ್ಚ್ ಮಾಡಿದಿ? ಬರೆ ಚಾ, ಚುಮ್ಮರಿ, ಮಿರ್ಚಿ ತಿನ್ಸಿ ನಾಯಿ ಥರಾ ಅಡ್ಡಾಡ್ಸಿದಿ. ಸಂಜಿಕ... ಎಣ್ಣಿನರ್ ಹೊಡಸ್ತಿ ಅಂದ್ರ ನಿಮ್ ಮನ್ಯಾನವ್ರ ಅಶೋಕಣ್ಣ ನಡಿಲ್ರೇ ಮಂಗ್ಯಾನ ಮಕ್ಳ. ಎಣ್ಣಿ ಹೊಡದ್ರ ಹೆಂತಿ ಬೈತಾಳ ಅಂತಾ ಸಾಗ ಹಾಕಿದ್ರ. ಗೆದ್ದ ಬಂದ ಮ್ಯಾಗ ಕ್ಷೇತ್ರಕ್ಕ ಬಂದಿದ್ದ ರೊಕ್ಕಾ ಎಲ್ಲಾ ಗುಡಿಸಿ ಗುಂಡಾಂತರ ಮಾಡಿ ದೊಡ್ಡ ಮನಿ ಕಟ್ಕೋಂಡಿ. ರಗಡ ಹೊಲ ಮಾಡ್ಕೊಂಡಿ. ಸಿಕ್ಕ ಸಿಕ್ಕವ್ರ ಕಡಿಂದ್ ಕಾಸ್ಟ್ಲಿ ಗಿಫ್ಟ್ ತಗೊಂಡಿ ಅಂದ್ರು ಹಿಂಬಾಲ್ಕರು. ಹೌದ್ಲೇ. ನಮ್ ಮನಿ ಹೆಸರು ಮಸೂತಿ. ಅದರ್ ತಕ್ಕಂಗ್ ನಾನ್ ನಡ್ಕೊಂಡಿನಿ. ಮಸೂತಿ ಮನಿ ಸೊಸಿ ಆಗಿ ಆ ಮನಿ ಮರ್ಯಾದಿ ಉಳಿಸ್ಲಿಲ್ಲಾ ಅಂದ್ರ ಹೆಂಗ್ರಪಾ? ನನ್ನ ವ್ಯಾಪ್ತಿ, ಕ್ಷೇತ್ರಾನ ಗುಡಿಸಿ 'ಮಸೂತಿ' ಮಾಡಿನಿ. ಕೆರಿ ಅಭಿವೃದ್ಧಿ, ರೋಡ್ ಮಾಡಾಕ ಬಂದಿದ್ದ ರೊಕ್ಕಾ ಎಲ್ಲಾ ನುಂಗಿ ನೀರ ಕುಡ್ದು, ಮೂರ್ನಾಲ್ಕು ತಲಮಾರಿಗೆ ಆಗಷ್ಟು ಆಸ್ತಿ ಮಾಡೇನಿ. ಈ ಸರೇ ಗೆಲ್ಲಬೇಕಂತ್ ನನಗೇನ್ ಆಸೆ ಇಲ್ಲಾ. ಮನಿ ಸೊಸಿ ಆಗಿ ಮರ್ಯಾದಿ ಉಳಿಸಿದ್ ಸಮಾಧಾನ ಐತಿ ಅಂದ್ರು. ಅಪೋಜಿಷನ್ ಕ್ಯಾಂಡಿಡೇಟು ಸ್ಟ್ರಾಂಗ್ ಅದಾವ್... ಈಗ ಎಚ್ಚರ್ ಆಗ್ಲಿಲ್ಲಾ ಅಂದ್ರ ನಿಮ್ಗ ಮಸೂತಿ ಕಟ್ಟತಾರ ನೋಡಕ್ಕ ಅಂತಾ ವಾಪಸ್ ಹೊರಟು ಹೋದ್ರು ಹಿಂಬಾಲಕರು!!!
- ಮಿರ್ಚಿವಾಲಾ