ನವದೆಹಲಿ: ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹೇಳಿದ್ದರೂ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತ್ರ ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿಗಳ ಅಧ್ಯಕ್ಷರನ್ನು ನೇಮಕ ಮಾಡುವಾಗ ಶಾಸಕರು ಹಾಗೂ ಚುನಾವಣೆಯಲ್ಲಿ ಸೋತವರನ್ನು ಪರಿಗಣಿಸದಿರಲು ದಿಗ್ವಿಜಯ್ ಸಿಂಗ್ ಸೂಚಿಸಿದ್ದಾರೆ ಎಂದರು.
ಆದರೆ , ಅವರು (ದಿಗ್ವಿಜಯ್ ಸಿಂಗ್ ) ಹೇಳಿದ್ದಾರೆ. ಫಾಲೋ ಆಗುತ್ತೋ ಇಲ್ವೋ? ಮತ್ತೆ ಮೀಟಿಂಗ್‌ಗೆ ಬಂದಾಗ ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ಆಗಬೇಕೆಂದು ಹೇಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನು ಹೈಕಮಾಂಡ್‌ನಲ್ಲಿ ತೀರ್ಮಾನ ಆಗಬೇಕು. ಈ ಬಗ್ಗೆ ಯಾವುದೇ ನಿಯಮಗಳಿಲ್ಲ. ಹಿಂದೆಯೂ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದರು. ಆ ಮೂಲಕ ದಿಗ್ವಿಜಯ್ ಸಿಂಗ್ ಅವರ ಮಾತನ್ನು ತಾವು ಪಾಲಿಸುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿದರು.
ಸಂಪುಟ ಪುನಾರಚನೆ ಮುನ್ಸೂಚನೆ: ಇದೇ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟ ವಿಸ್ತರಣೆ ಜತೆಗೆ ಪುನಾರಚನೆ ಮಾಡುವ ಮುನ್ಸೂಚನೆ ನೀಡಿದ್ದಾರೆ. ನಿಮಗ ಮಂಡಳಿಗಳ ಅಧ್ಯಕ್ಷರ ನೇಮಕದ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿರುವ ಸಿದ್ಧರಾಮಯ್ಯ ಸಂಪುಟದಲ್ಲಿ ಕೆಲವು ಬದಲಾವಣೆ ಮಾಡಲಾಗುವುದು. ಭಾರಿ ಪ್ರಮಾಣದಲ್ಲಿ ಪುನಾರಚನೆ ಮಾಡದಿದ್ದರೂ ಪ್ರಮುಖ ಬದಲಾವಣೆಯ ಇಂಗಿತ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿಗೆ ಕಣ್ಣು: ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಇಲ್ಲಿ ಅಧಿಕಾರ ಪಡೆಯಬೇಕೆಂಬ ಕಾರಣಕ್ಕೆ ಕರ್ನಾಟಕವನ್ನೇ ಗುರಿ ಮಾಡಿಕೊಂಡಿದ್ದಾರೆ. ಇನ್ನು ಇಪ್ಪತ್ತು ವರ್ಷ ಕಾಲ ಅಧಿಕಾರದಲ್ಲೇ ಇರುತ್ತೇವೆ ಎಂದು ಯಡಿಯೂರಪ್ಪ ವಿಧಾನಸಭೆಯಲ್ಲಿ ಹತ್ತು ಬಾರಿ ಹೇಳಿದ್ದರು. ಆದರೆ, ಅವರೆಲ್ಲಿದ್ದಾರೆ ಈಗ? ಕರ್ನಾಟಕ ಜನ ಬಿಜಪಿಯನ್ನು ಮತ್ತೆ ಒಪ್ಪಲು ಸಿದ್ಧರಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜನರು ರಾಷ್ಟ್ರಮಟ್ಟದ ವಿಷಯಗಳ ಮೇಲೆ ಮತ ನೀಡಿದ್ದಾರೆ. ಬದಲಾವಣೆಗಾಗಿ ಮತ ಹಾಕಿದ್ದಾರೆ ಎಂದರು.
ಗೃಹ ಸಚಿವರಿಗೆ ಬೆಂಬಲ: ಗೃಹ ಸಚಿವ ಜಾರ್ಜ್ ಕ್ರಿಯಾಶೀಲಲಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಅವರು ಕ್ರಿಶ್ಚಿಯನ್ ಅನ್ನೋ ಕಾರಣಕ್ಕೆ ಬಿಜೆಪಿ ನಾಯಕರು ಟಾರ್ಗೆಟ್ ಮಾಡ್ತಾ ಇದ್ದಾರೆ. ಅದಕ್ಕೆ ಮುಖ್ಯ ಕಾರಣಕ್ಕೆ ಬಿಜೆಪಿ ನಾಯಕರು ಟಾರ್ಗೆಟ್ ಮಾಡ್ತಾ ಇದ್ದಾರೆ. ಅದಕ್ಕೆ ಮುಖ್ಯ ಕಾರಣ ಬಿಜೆಪಿಯ ಕೋಮುವಾದಿ ಚಟುವಟಿಕೆಗಳನ್ನು ಜಾರ್ಜ್ ನಿಗ್ರಹಿಸಿದ್ದಾರೆ. ಶಿರಾ, ಚಿಕ್ಕಮಗಳೂರು ಮತ್ತಿತರ ಕಡೆಗಳಲ್ಲಿ ಬಿಗಿಗೊಳಿಸಿದ್ದಾರೆ. ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿಯನ್ನು ಮಟ್ಟಹಾಕಿದ್ದಾರೆ. ಇದರಿಂದ ಬಿಜೆಪಿಗೆ ಕಷ್ಟವಾಗಿದೆ. ಅದಕ್ಕಾಗಿ ಗೃಹ ಸಚಿವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.
ಕಠಿಣ ಕ್ರಮ: ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಬದ್ಧವಾಗಿದೆ. ಯಾರ ಮಕ್ಕಳಾದರೂ ಹೆಣ್ಣುಮಕ್ಕಳ ವಿರುದ್ಧ ದೌರ್ಜನ್ಯ ನಡೆದರೆ ಖಂಡಿಸಬೇಕು, ನಡೆಸುವವರನ್ನು ಶಿಕ್ಷಿಸಬೇಕು. ನಾನು ಅಂತವರನ್ನು ಜೈಲಿಗೆ ಕಳಿಸುತ್ತಿದ್ದೇವೆ. ಶಾಲೆಗಳಲ್ಲಿ ದೌರ್ಜನ್ಯ ನಡೆದಾಗ ಶಾಲಾ ಆಡಳಿತ ಮಂಡಳಿಗಳ ವಿರುದ್ಧವೂ ಕ್ರಮ ಜರುಗಿಸಿದ್ದೇವೆ. ತೀರ್ಥಹಳ್ಳಿ ಬಾಲಕಿ ನಂದಿತಾ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅವರ ಪಕ್ಷದವರೇ ಅತ್ಯಾಚಾರ ಮಾಡಿದ್ದರೂ, ಯಾರೂ ಹೆಣ್ಣುಮಕ್ಕಳ ಬಗ್ಗೆ ಮಾತನಾಡಿರಲಿಲ್ಲ. ಹಾಲಪ್ಪ, ರೇಣುಕಾಚಾರ್ಯರ ವಿರುದ್ಧ ಏನು ಕ್ರಮ ಕೈಗೊಂಡರು? ಲಕ್ಷ್ಮಣ ಸವದಿ ಸದನದಲ್ಲೇ ಬ್ಲೂಫಿಲಂ ನೋಡಲಿಲ್ಲವೇ? ಪದ್ಮಪ್ರಿಯಾ ಸಾವಿನ ಪ್ರಕರಣ ಏನಾಯಿತು ಎಂಬುದೂ ಗೊತ್ತಾಗಲಿಲ್ಲ. ಆಗ ಇವರು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.