ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕೆಂದು ತಾವು ವಾಮಮಾರ್ಗ ಹಿಡಿಯುವುದಿಲ್ಲ ಎಂದು ಬಿಜೆಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ.
ನಾಳೆಯಿಂದ ಆರಂಭಲಾಗಲಿರುವ ಬಿಜೆಪಿ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯ ವಿವರಗಳನ್ನು ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಟಿ ರವಿ ಅವರು, ಇಂದಿನ ಪದಾಧಿಕಾರಿಗಳ ಸಭೆಯಲ್ಲಿ ರಾಷ್ಟ್ರೀಯ ವಿಚಾರಗಳ ಜತೆಗೇ ರಾಜ್ಯದ ವಿಚಾರಗಳು ಪ್ರಸ್ತಾಪವಾಗಿವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲು ಹಿಂದೆ ಮಾಡಿದ್ದ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂಬ ಸೂಚನೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಈಗಿರುವ ವಾತಾವರಣದಲ್ಲಿ ಯಾವಾಗ ಬೇಕಾದರೂ ಚುನಾವಣೆ ನಡೆದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದು. ಹಾಗಾಗಿ ಅಸಂಸದೀಯ ಮಾರ್ಗದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ನಡೆಸುವ ಉದ್ದೇಶವನ್ನು ಪಕ್ಷ ಹೊಂದಿಲ್ಲ. ರಾಜ್ಯದಲ್ಲಿ ಚುನಾವಣೆ ನಡೆಯಲು ಇನ್ನು 3 ವರ್ಷಗಳು ಬಾಕಿ ಇದ್ದು, ಸದಸ್ಯತ್ವ ಅಭಿಯಾನದ ಮೂಲಕ ಪಕ್ಷವನ್ನು ಬಲಗೊಳಿಸುವ ಕೆಲಸ ನಡೆದಿದೆ ಎಂದು ರವಿ ಹೇಳಿದರು.
"ಅಧಿಕಾರಕ್ಕೆ ಬರಲು ನಮಗೆ ಆತುರವೇನೂ ಇಲ್ಲ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದು, ಸರ್ಕಾರದ ವಿರುದ್ಧ ಜನರ ಆಕ್ರೋಶ ಎಷ್ಟಿದೆ ಎಂಬುದು ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಕರಣದ ನಂತರ ನಡೆದ ಹೋರಾಟಗಳಿಂದ ಸಾಬೀತಾಗಿದೆ. ಯಾವಾಗ ಚುನಾವಣೆ ನಡೆದರೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಿಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು.