ಬೆಂಗಳೂರು: ಎಂಟು ವರ್ಷಗಳಲ್ಲಿ ಬಿಬಿಎಂಪಿಯಲ್ಲಿ ನಡೆದ ಅವ್ಯವಹಾರ ಮತ್ತು ಆರ್ಥಿಕ ದುರುಪಯೋಗದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ತಮ್ಮ ಪಕ್ಷ ಚುನಾವಣೆ ಎದುರಿಸಲು ಸಿದ್ಧ' ಎಂದು ಘೋಷಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಲಯ ಮತ್ತು ಚುನಾವಣಾ ಆಯೋಗ ತಕ್ಷಣವೇ ಬಿಬಿಎಂಪಿ ಚುನಾವಣೆ ನಡೆಸಲು ಸೂಚಿಸಿದರೂ ಕಾಂಗ್ರೆಸ್ ಸಿದ್ಧವಿದೆ. ಅಭ್ಯರ್ಥಿಗಳಾಗುವುದಕ್ಕೆ ಆಕಾಂಕ್ಷಿಗಳಿಂದ ಅರ್ಜಿಯನ್ನೂ ಕರೆಯಲಾಗಿದೆ. ಆದರೆ, ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಆಡಳಿತಾನುಕೂಲಕ್ಕಾಗಿ ಬಿಬಿಎಂಪಿ ವಿಕೇಂದ್ರಿಕರಣಗೊಳಿಸುವುದಾಗಿ ಕಾಂಗ್ರೆಸ್ ಜನರಿಗೆ ಭರವಸೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಪಕ್ಷದ ಮಾಜಿ ಮೇಯರ್‍ಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸರ್ಕಾರವೂ ಸಮಿತಿ ರಚಿಸಿತ್ತು. ಇದು ಬಿಬಿಎಂಪಿಯನ್ನು ಆಡಳಿತಾತ್ಮಕವಾಗಿ ಮೂರು ಭಾಗ ಮಾಡುವಂತೆ ಶಿಫಾರಸು ಮಾಡಿದ್ದು, ಅದರಂತೆ ವಿಭಜನೆಗೆ ಚಾಲನೆ ನೀಡಲಾಗುತ್ತಿದೆ' ಎಂದರು.
ಬಿಜೆಪಿಗೆ ನೈತಿಕತೆ ಇಲ್ಲ: ರಾಜ್ಯ ಸರ್ಕಾರ ಬಿಬಿಎಂಪಿ ವಿಭಜನೆಗೆ ಮುಂದಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ವಿನಾಕಾರಣ ಆಕ್ಷೇಪಿಸುತ್ತಿವೆ. ಜನರಲ್ಲಿ ಅನುಮಾನ ಬರುವಂತ ಹೇಳಿಕೆ ನೀಡುತ್ತಿವೆ. ಈ ಎರಡು ಪಕ್ಷಗಳು ಅಧಿಕಾರದಲ್ಲಿದ್ದಾಗ ಬಿಬಿಎಂಪಿಯಲ್ಲಿ ನಡೆದ ಅವ್ಯವಹಾರಕ್ಕೆ ಸರಿ ಪಡಿಸಲು ಕಾಂಗ್ರೆಸ್ ವಿಭಜನೆಗೆ ಮುಂದಾಗಿದೆ. ಮೇಲಾಗಿ ಇದು ನಮ್ಮ ಪ್ರಣಾಳಿಕೆಯ ಭರವಸೆ. ಆದರೆ, ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸುವುದಕ್ಕೆ ಪ್ರತಿಪಕ್ಷ ಬಿಜೆಪಿಗೆ ನೈತಿಕತೆಯೇ ಇಲ್ಲ ಎಂದು ಆರೋಪಿಸಿದರು.
2012ರಲ್ಲಿ ಅಂದಿನ ಬಿಜೆಪಿ ಸರ್ಕಾರದ ಜವಾಬ್ದಾರಿ ಯುತ ನಗರಾಭಿವೃದ್ಧಿ ಸಚಿವ ಸುರೇಶ್‍ಕುಮಾರ್ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ `ಪಾಲಿಕೆಯನ್ನು ಆಡಳಿತಾತ್ಮಕವಾಗಿ ತ್ರಿಭಜನೆ ಮಾಡಬೇಕು. ಇಲ್ಲವಾದಲ್ಲಿ ನಗರದ ಅಬಿsವೃದಿಟಛಿಯನ್ನು ನಿರೀಕ್ಷಿತ ವೇಗದಲ್ಲಿ ಸಾಧಿಸಲು ಸಾಧ್ಯವಿಲ್ಲ. ನಮ್ಮ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ' ಎಂದಿದ್ದರು. ಈಗ ಅವರೇ ಬಿsನ್ನರಾಗ ಹಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಾಡಿದ್ದು ಸಾಲ ಮಾತ್ರ
ಕಳೆದ ಎಂಟು ವರ್ಷಗಳಿಂದ ಬಿಜೆಪಿ ಬಿಬಿಎಂಪಿಯ ಆಡಳಿತ ಭಾಗವಾಗಿದೆ. ಆದರೆ ಅಧಿಕಾರಾವಧಿಯ ಕೊನೆಯಲ್ಲಿ ಸಾಲ ಮಾಡಿದ್ದು ಬಿಟ್ಟರೆ, ಮತ್ತೇನನ್ನೂ ಮಾಡಿಲ್ಲ. 2010ರಲ್ಲಿ ಬಿಜೆಪಿ 20 ವಾಹನ ನಿಲುಗಡೆ ಸಂಕೀರ್ಣ, ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಾರುಕಟ್ಟೆ, 93 ರಸ್ತೆ ಅಗಲೀಕರಣ, ಹೈಟೆಕ್ ಆಸ್ಪತ್ರೆ ಸೇರಿದಂತೆ ನೀಡದ ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದರು. ಬಿಬಿಎಂಪಿಗೆ ಕಳೆದ 5 ವರ್ಷಗಳಲ್ಲಿ ರು. 41963 ಕೋಟಿ ಬಜೆಟ್ ಮಂಜೂರಾಗಿತ್ತು. ಆದರೆ ಕೇವಲ ರು. 17434 ಕೋಟಿ ಮಾತ್ರ ಖರ್ಚು ಮಾಡಿದ್ದಾರೆ. ಆದರೆ ಒಟ್ಟಾರೆಯಾಗಿ ರು. 12000 ಕೋಟಿ ಸಾಲ ಮಾಡಿಟ್ಟಿದ್ದಾರೆ. ಕೆ.ಆರ್.ಮಾರುಕಟ್ಟೆ , ಮೆಯೊ ಹಾಲ್ ಕೋರ್ಟ್, ಕೆಂಪೇಗೌಡ ಮ್ಯೂಸಿಯಂ, ಕಲಾಸಿಪಾಳ್ಯ ಮಾರುಕಟ್ಟೆ ಸೇರಿದಂತೆ ಬೆಂಗಳೂರಿನ ಮಹತ್ವದ ಕಟ್ಟಡಗಳನ್ನು ರು. 2847 ಕೋಟಿ ಸಾಲಕ್ಕೆ ಅಡವಿಡಲಾಗಿದೆ ಎಂದರು.