ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೊನೆಯ ಹಂತ ತಲುಪಿದ್ದು, 17 ದಿನಗಳಲ್ಲಿ ರಾಜ್ಯದ 1 ಕೋಟಿಗೂ ಹೆಚ್ಚು ಕುಟುಂಬಗಳಿಂದ ಮಾಹಿತಿ ಸಂಗ್ರಹವಾಗಿದೆ. ಈ ಸಮೀಕ್ಷೆ ಕಾರ್ಯ ಶೇ.72.89ರಷ್ಟು ಮುಗಿದಿದ್ದು, ರಾಮನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೊನೆಯ ಸ್ಥಾನದಲ್ಲಿದೆ.
ರಾಜ್ಯದಲ್ಲಿ 1,39,74,088 ಕುಟುಂಗಳಿವೆ ಎಂದು ಸಮೀಕ್ಷೆ ಪೂರ್ವವಾಗಿ ಅಂದಾಜು ಮಾಡಲಾಗಿದ್ದು, ಇದರಲ್ಲಿ ಏ.27ರ ಸಂಜೆ ವೇಳೆಗೆ 1,01,85,748 ಕುಟುಂಗಳ ಸಮೀಕ್ಷೆ ಕಾರ್ಯ ಮುಗಿದಿದೆ. ಇನ್ನುಳಿದ ಕುಟುಂಬ ಗಳ ಸಮೀಕ್ಷೆ ಮೂರು ದಿನದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹಿಂದುಳಿದ ವರ್ಗಗಳ ಆಯೋಗದ ಮಾಹಿತಿ ಪ್ರಕಾರ, 30 ಜಿಲ್ಲೆಗಳ ಪೈಕಿ ರಾಮ ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನ ಚಿಕ್ಕಬಳ್ಳಾಪುರ, ಶಿವಮೊಗ್ಗ. ಈ ಎರಡೂ ಜಿಲ್ಲೆಗಳಲ್ಲಿ ಶೇ.90ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.
ದಾವಣಗೆರೆ, ಬೆಂಗಳೂರು ಗ್ರಾ. ಜಿಲ್ಲೆ ನಂತರದ ಸ್ಥಾನದಲ್ಲಿವೆ. 22 ಲಕ್ಷಕ್ಕೂ ಅಧಿಕ ಕುಟುಂಬಗಳನ್ನು ಹೊಂದಿರುವ ಬಿಬಿಎಂಪಿ ಪ್ರದೇಶ ದಲ್ಲಿ ಸಮೀಕ್ಷೆ ಕಾರ್ಯ ಶೇ.50ರಷ್ಟನ್ನೂ ದಾಟಿಲ್ಲ. ಇನ್ನೂ 12 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆ ನಡೆಯ ಬೇಕಿದೆ. ಶೇ.48.82ರಷ್ಟು ಸಾಧನೆ ಮಾತ್ರ ಮಾಡಿ ಬಿಬಿಎಂಪಿ ಕೊನೆ ಸ್ಥಾನ ದಲ್ಲಿದೆ. ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ 1,97, 214 ಬೆಂಗಳೂರು ನಗರದಲ್ಲಿ 2,11, 856 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 11,13,558 ಕುಟುಂಬ ಗಳ ಸಮೀಕ್ಷೆ ಪೂರ್ಣಗೊಂಡಿದೆ.