ಬೆಳಗಾವಿ: ರೈತರ ಸರಣಿ ಆತ್ಮಹತ್ಯೆ ನಿಯಂತ್ರಣಕ್ಕೆ ಪರಿಹಾರ ಕಂಡುಕೊಳ್ಳಲು ಹೆಣಗುತ್ತಿರುವ ರಾಜ್ಯ ಸರ್ಕಾರಕ್ಕೆ ಆಫ್ರಿಕಾ ದೇಶದಲ್ಲಿ ಭರವಸೆ ಗೋಚರಿಸಿದೆ. ಅಲ್ಲಿಗೆ ಹೋಗಿ ಬೇಸಾಯ ಮಾಡುವ ಆಸಕ್ತಿ ಇರುವ ಕೃಷಿಕರಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ.
ಆಫ್ರಿಕಾದ ಕೆಲ ರಾಷ್ಟ್ರಗಳಲ್ಲಿ ಮಂಡ್ಯ ರೈತರು ಕೃಷಿ ನಡೆಸುತ್ತಿರುವುದನ್ನು ಸಣ್ಣ ಕೈಗಾರಿಕೆ ಸಚಿವ ಸತೀಶ ಜಾರಕಿಹೊಳಿ ಖುದ್ದು ನೋಡಿ ಬಂದಿದ್ದಾರೆ. ತಮ್ಮ ಅನುಭವವನ್ನು ಪತ್ರಕರ್ತರೊಂದಿಗೆ ಹಂಚಿಕೊಂಡ ಅವರು, ಆಫ್ರಿಕಾ ದೇಶದಲ್ಲಿ ಕೃಷಿ ಚಟುವಟಿಕೆ ನಡೆಸಲು ಮುಂದೆ ಬರುವ ಕರ್ನಾಟಕದ ಪ್ರಗತಿ ಪರ ರೈತರಿಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುವುದು ಎಂದು ಪ್ರಕಟಿಸಿದರು.
ಆಫ್ರಿಕಾದಲ್ಲಿ ಹೊರ ದೇಶದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡುತ್ತಾರೆ. ಕನ್ನಡಿಗರೂ ಸೇರಿದಂತೆ ಭಾರತದ ಅನೇಕರು ಅಲ್ಲಿ ಬೇಸಾಯ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ರೈತರು 1,400 ಎಕರೆಯಲ್ಲಿ ಕೃಷಿ ಕೈಗೊಂಡಿದ್ದಾರೆಂದರು.
ಅಲ್ಲಿನ ಜಮೀನು ಫಲವತ್ತತೆಯಿಂದ ಕೂಡಿದೆ. ಆಫ್ರಿಕಾ, ವರಾಂಡಾ, ಇಥಿಯೋಪಿಯಾ ಮತ್ತು ಕೀನ್ಯಾದಲ್ಲಿ ಕೃಷಿ ಚಟುವಟಿಕೆ ನಡುಸುವವರಿಗೆ ಲಕ್ಷ ಎಕರೆವರೆಗೂ ಜಮೀನು ನೀಡಲಾಗುತ್ತಿದೆ. ಅಲ್ಲಿನ ಸರ್ಕಾರ, ಕೃಷಿ ಮಾಡುತ್ತಿರುವ ಭಾರತೀಯರು ಹಾಗೂ ಕರ್ನಾಟಕದ ರೈತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇನೆ. ಅಲ್ಲಿನ ಸರ್ಕಾರ ಕರ್ನಾಟಕದ ಆಸಕ್ತ ರೈತರಿಗೂ ಜಮೀನು ನೀಡಲು ಮುಂದೆ ಬಂದಿದೆ ಎಂದು ವಿವರಿಸಿದರು. ನಮ್ಮ ಇಲಾಖೆ ವತಿಯಿಂದ ರೈತರು ವಿದೇಶ ಪ್ರವಾಸ ಕೈಗೊಳ್ಳಲು ಅವಕಾಶವಿದೆ. ಪ್ರತಿ ಜಿಲ್ಲೆಯಿಂದ ತಲಾ ಒಬ್ಬ ರೈತರು ಮುಂದೆ ಬಂದರೂ ಆ ದೇಶದ ಪ್ರವಾಸಕ್ಕೆ ಅವಕಾಶ ಮಾಡಿ ಕೊಡಲಾಗುವುದು. ಅಲ್ಲಿ ಕೂಡ ಬತ್ತ, ಕಾಫಿ, ಟೀ ಹಾಗೂ ಗೋದಿ, ಹಣ್ಣುಗಳನ್ನು ಬೆಳೆಯಲಾಗುತ್ತದೆ. ಇಳುವರಿಯೂ ಚೆನ್ನಾಗಿದೆ ಎಂದು ಜಾರಕಿಹೊಳಿ ಹೇಳಿದರು.