ಬೆಂಗಳೂರು: ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಅರ್ಹತೆ ತಪ್ಪುವುದಕ್ಕೆ ಬಿಜೆಪಿಯೇ ನೇರ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಒಬ್ಬ ಸಚಿವನಾಗಿ ಅನಂತ್ ಕುಮಾರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಬೆಂಗಳೂರು, ಮೈಸೂರು ಮತ್ತು ಕಲಬುರಗಿ ನಗರಗಳು ಕೇಂದ್ರ
ಸರ್ಕಾರ ವಿಧಿಸಿದ ಮಾನದಂಡಗಳ ವ್ಯಾಪ್ತಿಯಲ್ಲಿ ಬಂದಿಲ್ಲ. ಆದರೆ, ಅನಂತ್ ಕುಮಾರ್ ಅವರು ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. ಐದು ವರ್ಷ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿ ಇದ್ದವರು ಯಾರು? ಬಿಜೆಪಿಯವರಲ್ಲವೇ? ಹಾಗಾದರೆ ಬೆಂಗಳೂರು ಕೇಂದ್ರ ಸರ್ಕಾರ ನಿಗದಿಪಡಿಸಿದ ಅರ್ಹತೆ ಪಟ್ಟಿಯಲ್ಲಿ ಬಾರದೇ ಇರುವುದಕ್ಕೆ ಬಿಜೆಪಿಯವರೇ ಕಾರಣರಲ್ಲವೇ? ಎಂದು ಪ್ರಶ್ನಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹವಾಗಿಲ್ಲ ಎಂದರೆ ಯಾರು ಕಾರಣ? ಸರ್ಕಾರವೋ ಅಥವಾ ಮಹಾನಗರ ಪಾಲಿಕೆಯೇ? ಕೇಂದ್ರದ ಮಂತ್ರಿಯಾಗಿ ಅನಂತ್‍ಕುಮಾರ್ ಇಂಥ ಹೇಳಿಕೆ ನೀಡುವುದು ಸರಿಯೇ? ತಾವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಬಿಎಂಪಿ ಅವ್ಯವಹಾರ, ಅಧ್ವಾನಕ್ಕೆ ಬಿಜೆಪಿಯೇ ಕಾರಣ. ಆದರೆ, ಚುನಾವಣಾ ಹಿನ್ನೆಲೆಯಲ್ಲಿ ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಸರ್ಕಾರ ಬಿಜೆಪಿಯ ಹಗರಣಗಳ ಪಟ್ಟಿಕೊಡಲಿ, ಅದಕ್ಕೆ ನಾವು ಲೆಕ್ಕ ಚುಕ್ತಾ ಮಾಡುತ್ತೇವೆ ಎಂದು ಮಾಜಿ ಸಚಿವ ಸುರೇಶ್‍ಕುಮಾರ್ ಅವರು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ರಾಜೇಂದ್ರಕುಮಾರ್ ಕಟಾರಿಯಾಅವರ ವರದಿಗೆ ಮೊದಲು ಉತ್ತರ ಕೊಡಲಿ. ವರದಿ ಈಗಾಗಲೇ ಸಲ್ಲಿಕೆಯಾಗಿದೆಯಲ್ಲ.
ಅದಕ್ಕೆ ಉತ್ತರಿಸಬಹುದಿತ್ತು ಎಂದು ವ್ಯಂಗ್ಯವಾಡಿದರು. ಬಿಜೆಪಿ ಕಳೆದ ವರ್ಷದಿಂದ ಬಿಬಿಎಂಪಿಯಲ್ಲಿ ಅಧಿಕಾರ ನಡೆಸಿದೆ. ಅವರ ಕಾಲ ದಲ್ಲಿ ಆದ ಎಲ್ಲ ಅವ್ಯವಹಾರಗಳ ಬಗ್ಗೆ ನಾವು ಚಾರ್ಜ್ ಶೀಟ್ ಹಾಕುತ್ತೇವೆ. ಜನತಾ ನ್ಯಾಯಾಲಯ ದಲ್ಲಿ ಹಗರಣಗಳ ಆರೋಪ ಪಟ್ಟಿ ಸಲ್ಲಿಸುತ್ತೇವೆಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಆಧುನಿಕ ಕರ್ನಾಟಕ ಕಟ್ಟಲು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಸ್ವಚ್ಛ ರಾಜಕಾರ ಣದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು ಕರ್ನಾಟಕದ ಮುಖ್ಯಮಂತ್ರಿಯಾಗಿ,ಎಐಸಿಸಿ ಅಧ್ಯಕ್ಷರಾಗಿ ರಾಷ್ಟ್ರ ಮತ್ತು ರಾಜ್ಯ ರಾಜಕಾರಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಯನ್ನುಸರ್ಕಾರ ಸ್ಮರಿಸುತ್ತದೆ ಎಂದರು.