ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇರುವಾಗ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರಕ್ಕೆ ತಂದರೆ ಎತ್ತು ಏರಿಗೆ, ಕೋಣ ನೀರಿಗೆ ಎನ್ನುವಂತಾಗುತ್ತದೆ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
ನಗರದ ವಿವಿಧೆಡೆ ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಜತೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಶಾಸಕರೇ ಇರುವ ಕಡೆ ಕಾಂಗ್ರೆಸ್ ಗೆಲ್ಲಿಸಬೇಕು. ಆಗ ಗೆದ್ದವರು ಶಾಸಕರು ಮುಖ್ಯಮಂತ್ರಿ ಮಾರ್ಗದರ್ಶನದಂತೆ ಕೆಲಸ ಮಾಡುತ್ತಾರೆ. 9 ವರ್ಷಗಳಿಂದ ನಗರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಕಳೆದ 5 ವರ್ಷಗಳಲ್ಲಿ ಆಡಳಿತ ನಡೆಸಿದ ಬಿಜೆಪಿಯಿಂದ ಸಂಚಾರ, ಕಸ ಮತ್ತು ರಸ್ತೆ ಸಮಸ್ಯೆಗಳು ಹೆಚ್ಚಾಗಿವೆ. ನಗರದಲ್ಲಿ ಬದುಕುವುದೇ ಅಸಾಧ್ಯ ಎನ್ನುವಂತಾಗಿದೆ. ರಸ್ತೆಗಾಗಿ ಹಣ ವೆಚ್ಚ ಮಾಡಲಿಲ್ಲ. ಸರ್ಕಾರ ನೀಡಿದ ಹಣವನ್ನೂ ಬಿಜೆಪಿಯವರು ತಿಂದು ಮುಗಿಸಿದರು. ಅವರಿಗೆ ಅಧಿಕಾರ ನೀಡಿದರೆ ಮತ್ತೆ ಹಣ ನುಂಗುತ್ತಾರೆ ಎಂದು ಸಿದ್ದರಾಮಯ್ಯ ಆರೋಪಗಳ ಪಟ್ಟಿಯನ್ನೇ ಹೇಳಿದರು.
ಸೋಮಣ್ಣನ ಮಾತು ಕೇಳ್ಬೇಡಿ: ಬಿಬಿಎಂಪಿಯಲ್ಲಿ ಬಿಜೆಪಿ ಗೆದ್ದರೆ ಅಭಿವೃದ್ಧಿ ಕೆಲಸ ಆಗಲ್ಲ. ಏಕೆಂದರೆ, ಗೆದ್ದ ಅಭ್ಯರ್ಥಿ ನೇರ ಸರ್ಕಾರದ ನೆರವು ಪಡೆಯುವ ಬದಲು ಸೋಮಣ್ಣನನ್ನು ಹುಡುಕಿಕೊಂಡು ಹೋಗುತ್ತಾರೆ. ಸೋಮಣ್ಣ ಏನೂ ಕೆಲಸ ಮಾಡುವುದಿಲ್ಲ. ಅವರು ಏನೇನೋ ಬೊಗಳೆ ಬಿಡುತ್ತಾರೆ. ಅವರ ಮಾತು ಯಾರೂ ಕೇಳಬೇಡಿ. ಅದರ ಬದಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕೈ ಮುಗಿದು ವಿನಂತಿಸಿದರು.
ನೆನಪಾದ ಹಾಲಪ್ಪ, ರೇಣುಕಾಚಾರ್ಯ: ಮಾಜಿ ಸಚಿವರಾದ ಹಾಲಪ್ಪ ಮತ್ತು ರೇಣುಕಾಚಾರ್ಯ ಇಬ್ಬರೂ ಬಿಡೆಪಿಯ ಮುತ್ತುರತ್ನಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.