ಬೆಂಗಳೂರು: ಕೈಗೆಬಂದ ತುತ್ತು ಬಾಯಿಗೆ ಬರದಂತೆ ತಡೆಯುವ ಕಾಂಗ್ರೆಸ್ ತಂತ್ರಕ್ಕೆ ಮರು ತಂತ್ರ ಹಾಕಿರುವ ಬಿಜೆಪಿಯು ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳಲು ರಣತಂತ್ರ ರೂಪಿಸುತ್ತಿದ್ದು, ಈ ಸಂಬಂಧ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅವರು ಶನಿವಾರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಜೆಡಿಎಸ್ ಬೆಂಬಲ ಕೋರಿದ್ದಾರೆ.
ಇಂದು ಬೆಳಗ್ಗೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದಿ ಸದಾನಂದಗೌಡ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮೈತ್ರಿ ಬಗ್ಗೆ ಚರ್ಚಿಸಿದ್ದಾರೆ.
ದೇವೇಗೌಡರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ದೇವೇಗೌಡರೊಂದಿಗೆ ಚರ್ಚಿಸಿದ್ದೇನೆ. ಬಿಬಿಎಂಪಿಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ದೇವೇಗೌಡರು ಸೆಪ್ಟೆಂಬರ್ 2ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಚಿತವಾಗಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹಲವು ಸದಸ್ಯರು ಜೆಡಿಎಸ್‍ನೊಂದಿಗೆ ಹೋಗುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ಸದಾನಂದಗೌಡರು ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ವಿಧಾನಪರಿಷತ್ ಪಕ್ಷೇತರ ಸದಸ್ಯ ಮಲ್ಲಿಕಾರ್ಜುನ್ ಅವರು ಜೆಡಿಎಸ್ ನೊಂದಿಗೆ ಹೋಗುವುದು ಸೂಕ್ತ. ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡುವುದು ಅಗತ್ಯ ಎಂದು ಅಭಿಪ್ರಾಯಮಂಡಿಸಿದ್ದಾರೆ. ಈ ಬಗ್ಗೆ ಆರ್. ಅಶೋಕ್ ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದಿವೆ ಪಕ್ಷದ ಮೂಲಗಳು.
ಪಕ್ಷೇತರ ಸದಸ್ಯರನ್ನು ಮನವೊಲಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಪ್ರಯತ್ನವನ್ನೂ ನಡೆಸಿದ್ದಾರೆ. ಕೆಲವು ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದೂ ಸಹ ಗೊತ್ತಾಗಿದೆ. ಆದರೆ, ನಂಬಿಕೆ ಕಷ್ಟಸಾದ್ಯವಾಗಿರುವುದರಿಂದ ಪರ್ಯಾಯ ಆಲೋಚನೆಯೂ ಅಗತ್ಯ ಎಂದು ಸಭೆಯಲ್ಲಿ ಅಭಿಪ್ರಾಯವ್ಯಕ್ತವಾಗಿದೆ.
ಮೈತ್ರಿ ಮುನಿಸು
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾತುಕತೆ ಪ್ರಾರಂಭವಾಗುತ್ತಿದ್ದಂತೆ ಮ್ಯಾಜಿಕ್ ನಂಬರ್‍ನ ಲೆಕ್ಕಾಚಾರ ಪ್ರಾರಂಭವಾಗಿದೆ. ಕೋಮುವಾದಿ ಬಿಜೆಪಿ ಬಿಬಿಎಂಪಿ ಯಲ್ಲಿ ಕೂಡದಂತೆ ತಡೆಯುವುದೇ ಕಾಂಗ್ರೆಸ್ ಜೊತೆಗಿನ ಮೈತ್ರಿಯ ಮೂಲ ಎಂದ ಜೆಡಿಎಸ್ 100 ವಾರ್ಡ್ ಗೆದ್ದು ಬೀಗಿದ ಬಿಜೆಪಿಯಲ್ಲಿ ಈಗ ತಳಮಳದ ಛಾಯೆ. ಪ್ರತಿ ತಂತ್ರ ಹೆಣೆಯಲು ಎಲ್ಲ ರೀತಿಯ ಸಿದ್ಧತೆ. ಶುಕ್ರವಾರ ವರಮಹಾಲಕ್ಷ್ಮಿ ಪೂಜೆಗಿಂತ ಮೇಯರ್‍ಗಿರಿ ಮೈತ್ರಿ ಪೂಜೆಯೇ ವಿಜೃಂಭಿಸಿತು. ಮಹತ್ವದ ಮಾತುಕತೆ ನಡೆದವು.