ಮಾಗಡಿ: ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚುವ ಮೂಲಕ ಜೆಡಿಎಸ್ ಒಡೆಯುವ ಕೆಲಸ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ವಿಜೇತ ಪ್ರಜಾಪ್ರತಿನಿಧಿಗಳು, ಸಹಕಾರಿಗಳ ಸಂಭ್ರಮೋತ್ಸವ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ, ನಮ್ಮ ಪಕ್ಷವನ್ನು ಒಡೆಯುವುದರಿಂದ ರಾಜ್ಯಕ್ಕೆ ನಷ್ಟ ಎಂಬುದನ್ನು ಮಾಧ್ಯಮಗಳು ಮತ್ತು ಜನತೆ ಅರ್ಥಮಾಡಿಕೊಳ್ಳಬೇಕು ಎಂದರು. ಶಾಸಕ ಬಾಲಕೃಷ್ಣ, ಜಮೀರ್ ಅಹಮದ್ ಹಾಗೂ ಚಲುವರಾಯಸ್ವಾಮಿ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಕರೆದಿಲ್ಲ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯನ್ನು ತಿರುಚಲಾಗಿದೆ. ಕೆಲ ಪತ್ರಿಕೆಗಳು ನನ್ನ ಹೇಳಿಕೆಗಳನ್ನು ತಿರುಚಿಗೊಂದಲ ಮೂಡಿಸುತ್ತಿವೆ. ದೃಶ್ಯ ಮಾಧ್ಯಮಗಳು ಟಿಆರ್‍ಪಿಗೋಸ್ಕರ ಕೆಲವು ಪ್ರತಿಕ್ರಿಯೆಗಳನ್ನು ಸಂಪೂರ್ಣ ಅರ್ಥೈಸಿಕೊಳ್ಳದೆ ದೊಡ್ಡದಾಗಿ ಬಿಂಬಿಸಿ, ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿವೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ನನ್ನ ಮತ್ತು ಬಾಲಕೃಷ್ಣ ನಡುವಿನ ಸಂಬಂಧ ತುಂಬಾ ಚೆನ್ನಾಗಿದೆ. ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಕೆಲ ಮಾಧ್ಯಮಗಳು ಮಾಡುತ್ತಿವೆ. ಹಿಂದಿನ ವಿಧಾನಸಭೆ ಚುನಾವಣೆ ವೇಳೆಯೂ ಪಕ್ಷ ಕೇವಲ 13 ಸ್ಥಾನ ಗಳಿಸುತ್ತದೆಂದು ಸಮೀಕ್ಷೆ ಪ್ರಕಟಿಸಿ ಮತದಾರರಲ್ಲಿ ಗೊಂದಲ ಮೂಡಿಸಿದರು. ನೇರ ನಡೆ ನುಡಿ ವ್ಯಕ್ತಿತ್ವದ ಬಾಲಕೃಷ್ಣ ಅವರು ನನ್ನ ಹೃದಯದಲ್ಲಿದ್ದಾರೆ. ಅವರಿಗೆ ಪಕ್ಷ ಬಿಟ್ಟು ಹೋಗುವಂತೆ ಎಂದೂ ಹೇಳಿಲ್ಲ. ಅವರು ಪಕ್ಷ ತೊರೆಯಲು ನಾನು ಬಿಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಾರ ಮನೆ ಬಾಗಿಲಿಗೆ ಹೋದರೂ ತಪ್ಪಿಲ್ಲ ಎಂದು ಹೇಳಿದರು.
ಇಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಕುಮಾರಸ್ವಾಮಿ ಬರುತ್ತಾರೋ, ಇಲ್ಲವೋ ಎಂಬುದಾಗಿ ಮಾಧ್ಯಮದವರಲ್ಲಿ ಕುತೂಹಲ ಮೂಡಿತ್ತು. ಇದು ನನ್ನ ಮನೆ ಕಾರ್ಯಕ್ರಮವಾಗಿದ್ದು, ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಹೇಳುವ ಮೂಲಕ ಗೊಂದಲಗಳಿಗೆ ಕುಮಾರಸ್ವಾಮಿ ತೆರೆ ಎಳೆದರು.