ಬೆಂಗಳೂರು: ಕುಮಾರಸ್ವಾಮಿಯವರೇ ನನ್ನ ಮೇಲೆ ಕುಸ್ತಿ ಮಾಡಬೇಡಿ. ಜೆಡಿಎಸ್ ಅಧಿಕಾರಕ್ಕೆ ಬಂದರೆ ನೀವೇ ಸಿಎಂ ಆಗೋದು. ನನಗೆ ಸಿಎಂ ಸ್ಥಾನ ಬೇಡ. ಶಾಶ್ವತ ನೀರಾವರಿ ಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದರು.
ನಾನು 4 ಬಾರಿ ಶಾಸಕನಾಗಿ ಆಯ್ಕೆಯಾಗಲು 20 ತಿಂಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿದ್ದ ಅಭಿವೃದ್ಧಿ ಕಾರ್ಯ ಕಾರಣ. ಇದರಿಂದಲೇ ಗೆಲ್ಲುತ್ತಾ ಬಂದಿದ್ದೇನೆ. ಜಾತಿ, ಜಾತಿಗೆ ವಿಷ ಬಿತ್ತುವ ಕೆಲಸ ಮಾಡಲಾಗುತ್ತಿದೆ. ಓಟಿಗಾಗಿ ಜಾತಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ನಮ್ಮ ಪಕ್ಷ ಜಾತ್ಯತೀತ ಪಕ್ಷವಾಗಿಯೇ ಎಲ್ಲ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು ಎಂದರು.
ಭಿನ್ನಮತ ಶಮನಕ್ಕೆ ಜೆಡಿಎಸ್ ಕಸರತ್ತು
ಇಂದು ದೇವೇಗೌಡರ ಸಮ್ಮುಖದಲ್ಲಿ ಶಾಸಕರ ಸಭೆ, ಪರಿಷತ್ ಅಭ್ಯರ್ಥಿಗಳ ಆಯ್ಕೆ
ಬೆಂಗಳೂರು: ಜೆಡಿಎಸ್ ಭಿನ್ನಮತ ಬೂದಿ ಮುಚ್ಚಿದ ಕೆಂಡದಂತಿದ್ದು, ಬುಧವಾರ ನಡೆಯುವ ಶಾಸಕರ ಸಭೆಯಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ.
ಆದರೆ, ಮಾಜಿ ಪ್ರಧಾನಿ ದೇವೇಗೌಡರು ಸಭೆಯ ಅಧ್ಯಕ್ಷತೆ ವಹಿಸುವುದರಿಂದ ಭಿನ್ನಮತದ ಬೆಂಕಿ ಆರಿಸುವ ಪ್ರಯತ್ನ ನಡೆಸಲಿದ್ದಾರೆ. ಭಿನ್ನಮತ ನಿವಾರಿಸುವ ನಿಟ್ಟಿನಲ್ಲಿ ದೇವೇಗೌಡರು ಮಂಗಳವಾರ ಬೆಳಗ್ಗೆ 11 ಗಂಟೆಗೆ ರಿಚ್‍ಮಂಡ್ ವೃತ್ತದ ಬಳಿಯ ಹೊಟೇಲ್‍ನಲ್ಲಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ಸಭೆ ಕರೆದಿದ್ದಾರೆ. ಆದರೆ, ಈ ಮಧ್ಯೆ ಮಾಗಡಿಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಆಯೋಜಿಸಿದ್ದ ಸಮಾವೇಶದಲ್ಲಿ ಕುಮಾರಸ್ವಾಮಿ ದಿಢೀರ್ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.
ಎಲ್ಲಾ ಗೊಂದಲಗಳಿಗೂ ತೆರೆ ಎಳೆಯುವ ಹೇಳಿಕೆಗಳನ್ನು ನೀಡಿದ್ದಾರೆ. ಆದರೂ ಕುಮಾರಸ್ವಾಮಿ ನಡವಳಿಕೆ ಮತ್ತು ಹೇಳಿಕೆಗಳು ಶಾಸಕರನ್ನು ಬೇಸರಕ್ಕೆ ನೂಕಿದ್ದು, ಇದನ್ನು ಪ್ರಸ್ತಾಪಿಸಲು ಶಾಸಕರು ಸಜ್ಜಾಗಿದ್ದಾರೆ. ಒಂದೊಮ್ಮೆ ಗೌಡರು ಈ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸದಿದ್ದರೆ, ತಾವೇ ಅದನ್ನು ಎತ್ತಲು ನಿರ್ಧರಿಸಿದ್ದಾರೆ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗಳಿಗೂ ಸ್ಪಷ್ಟೀಕರಣ ಕೇಳಲು ಬಯಸಿದ್ದಾರೆ. ಹೀಗಾಗಿ ಬುಧವಾರದ ಶಾಸಕರ ಸಭೆಯಲ್ಲಿ ಭಿನ್ನಮತದ ಜತೆಗೆ ಮತ್ತೆ ಮೈತ್ರಿ ವಿಚಾರ ಪ್ರಸ್ತಾಪವಾಗುವ ಸಾಧ್ಯತೆಯೂ ಇದೆ.
ಒಂದೊಮ್ಮೆ ಎಲ್ಲಾ ಶಾಸಕರು ಮೈತ್ರಿಗೆ ಒಲವು ತೋರಿಸಿದರೆ ಕಾಂಗ್ರೆಸ್ ಮೈತ್ರಿ ವಿಚಾರ ಮತ್ತೆ ತೆರೆದುಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಜತೆಗಿನ ಮೈತ್ರಿ ಮುಗಿದ ಅಧ್ಯಾಯ ಎಂದು ದೇವೇಗೌಡರು ಈಗಾಗಲೇ ಅಧಿಕೃತವಾಗಿ ಪ್ರಕಟಿಸಿರುವುದರಿಂದ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆಯೂ ಚರ್ಚೆಯಾಗಲಿದೆ. ಇದಕ್ಕೆ ಹೆಚ್ಚಿನ ನಾಯಕರು ಸಮ್ಮತಿಸಿದರೆ, ಸಭೆಯಲ್ಲೇ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರು ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಕಾರ್ಯಕಾರಣಿಗೆ ಪೂರ್ವಭಾವಿಯಾಗಿ ಸಭೆ ಕರೆಯಲಾಗಿದೆ. ಶಾಸಕರ ಗೊಂದಲ ನಿವಾರಣೆ ಮತ್ತು ಭಿನ್ನಮತ ಸರಿಪಡಿಸುವ ಕಾರ್ಯ ನಡೆಸುತ್ತದೆ. ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
-ವೈ ಎಸ್ ವಿ ದತ್ತ ಜೆಡಿಎಸ್ ವಕ್ತಾರ