ರಾಜಕೀಯ

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಬಂತು ಡಿಜಿಟಲ್ ಟಚ್

Rashmi Kasaragodu

ಬೆಂಗಳೂರು: ಮೊಬೈಲ್ ಮಿಸ್ಡ್ ಕಾಲ್ ನಂತರ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಈಗ ಡಿಜಿಟಲ್ ಟಚ್ ಸಿಕ್ಕಿದೆ. ಭಾನುವಾರದಿಂದ ಅಧಿಕೃತವಾಗಿ ವೆಬ್‍ಸೈಟ್ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಮೊಬೈಲ್ ಮಿಸ್ಡ್‍ಕಾಲ್ ಮೂಲಕ 3-5 ನಿಮಿಷಗಳಲ್ಲಿ ನಡೆಯುತ್ತಿದ್ದ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಈಗ ಕೇವಲ 30 ಸೆಕೆಂಡುಗಳಲ್ಲಿ ಪೂರ್ಣವಾಗಲಿದೆ. ಬೆಂಗಳೂರು ನಗರ ಯುವ ಮೋರ್ಚಾ ಸಿದ್ಧಪಡಿಸಿರುವ ಡಿಜಿಟಲ್ ವೆಬ್‍ಸೈಟ್ ಸದಸ್ಯತ್ವ ಅಭಿಯಾನಕ್ಕೆ ಭಾನುವಾರ ಪಕ್ಷದ ಕಚೇರಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಚಾಲನೆ ನೀಡಿದರು. ಬೆಂಗಳೂರು ನಗರವೊಂದರಲ್ಲಿಯೇ  ಶೇ.70 ರಷ್ಟು ಮೊಬೈಲ್ ಬಳಕೆದಾರರಿದ್ದಾರೆ. ಹಾಗೆಯೇ  ಶೇ.17ರಷ್ಟು ಜನ ಅಂತರ್ಜಾಲ ಬಳಸುತ್ತಿದ್ದಾರೆ. ಇವರು ನಿತ್ಯವೂ ಕಂಪ್ಯೂಟರ್ ಮುಂದೆ ಕುಳಿತು ಕೆಲಸದ ಒತ್ತಡದಲ್ಲಿರುವುದರಿಂದ ಸದಸ್ಯತ್ವ ಪಡೆಯುವುದು ಕಷ್ಟ. ಅವರಿಗೆ ಈ ಡಿಜಿಟಲ್ ವೆಬ್‍ಸೈಟ್ ಹೆಚ್ಚು ಸಹಕಾರಿ ಎಂದರು. ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಇದುವರೆಗೂ 36.20 ಲಕ್ಷ ಜನರು ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಇದಕ್ಕೆ ಮತ್ತಷ್ಟು ಪೂರಕವಾಗಲು ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಅಭಿಯಾನ ಶುರು ವಾಗುತ್ತಿದೆ. ಕಡಿಮೆ ಅವಧಿಯಲ್ಲಿ ಸದಸ್ಯತ್ವ ಪಡೆದುಕೊಳ್ಳಬಹುದಾದ ಈ ವೆಬ್‍ಸೈಟನ್ನು ಜನರು ಸದುಪಯೋಗಪಡಿಸಿಕೊಳ್ಳಲಿ ಎಂದರು.
ನಗರ ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿಗೌಡ ಪ್ರಸ್ತಾವಿಕವಾಗಿ ಮಾತನಾಡಿ, ಇದು ಸುಮಾರು ಒಂದೂವರೆ ತಿಂಗಳ ಪರಿಶ್ರಮ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರ ಅನುಮತಿ ಪಡೆದು ಇದನ್ನು ಅಭಿವೃದ್ಧಿ ಗೊಳಿಸಲಾಗಿದೆ ಎಂದರು. ಶಾಸಕ ಅಶ್ವತ್ಥ್‍ನಾರಾಯಣ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾಳಾವಿಕಾ, ನಗರ ಘಟಕದ ಅಧ್ಯಕ್ಷ ಸುಬ್ಬಣ್ಣ, ನಗರ ಸದಸ್ಯತ್ವ ಅಭಿಯಾನದ ಪ್ರಮುಖ ಸದಾಶಿವ ಹಾಜರಿದ್ದರು. ಸಂಪರ್ಕಕ್ಕೆ www.bjpmember.org.

SCROLL FOR NEXT