ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರು ಪುಸ್ತಕವೊಂದನ್ನು ಬಿಡುಗಡೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು "ಅರ್ಕಾವತಿ ಕರ್ಮಕಾಂಡ ಸತ್ಯ-ಮಿಥ್ಯಗಳ ಇಣುಕು ನೋಟ" ಎಂಬ ಪುಸ್ತಕವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ ಸ್ವಾಮಿ ಅವರು, 20 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 702ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ. ನ್ಯಾಯಾಲಯದ ಅದೇಶವಿದ್ದರೂ ಮುಖ್ಯಮಂತ್ರಿಗಳು ಸಹಿ ಹಾಕಿರುವುದು ನ್ಯಾಯಾಂಗ ನಿಂದನೆಯಾಗಿದೆ ಎಂದರು.
ಅಲ್ಲದೆ ನಾನು ಅರ್ಕಾವತಿ ಕುರಿತ ಪುಸ್ತಕ ಬಿಡುಗಡೆ ಮಾಡುತ್ತಿರುವ ವಿಷಯ ನಮ್ಮ (ಜೆಡಿಎಸ್) ಪಕ್ಷದ ಕೆಲವು ಶಾಸಕರಿಗೆ ಅಸಮಾಧಾನ ತಂದಿದ್ದು, ನೀವು ಇದರಿಂದ ಏನು ಸಾಧಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ತಮ್ಮದೇ ಪಕ್ಷದ ಶಾಸಕರ ವಿರುದ್ಧವೇ ಅಸಮಾಧಾನ ಹೊರಹಾಕಿದರು. ಅಂತೆಯೇ ಈ ಪುಸ್ತಕದಲ್ಲಿರುವ ಮಾಹಿತಿಯನ್ನು ನಾನು ಪಕ್ಷದ ವೆಬ್ ಸೈಟ್ ಗೆ ಹಾಕುತ್ತೇನೆ. ಇದನ್ನು ಬಳಸಿಕೊಂಡು ಯಾರಾದರು ಪಿಐಎಲ್ ಹಾಕಿದ್ರೆ ಸತ್ಯ ಹೊರಬರಲಿದೆ ಎಂದು ಈ ಹೇಳಿದರು.