ಬೆಂಗಳೂರು ಬಿಬಿಎಂಪಿ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಮತ್ತೆ ವೇಳಾಪಟ್ಟಿ ಪ್ರಕಟಿಸಿದೆ. ಆದರೆ ಆಯೋಗದಲ್ಲಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆ ಭರದ ಸಿದ್ಧತೆಯಷ್ಟು ರಾಜಕೀಯ ಪಕ್ಷಗಳಲ್ಲಿ ಕಾಣುತ್ತಿಲ್ಲ. ಅದರಲ್ಲೂ ಅಭ್ಯರ್ಥಿಯಾಗಬೇಕೆಂಬ ಆಕಾಂಕ್ಷಿಗಳು ತಂತಮ್ಮ ಮುಖಂಡರ ಮನೆಯಲ್ಲಿ ಲಾಬಿ ನಡೆಸುತ್ತಿದ್ದ ದೃಶ್ಯಗಳು ಈಗಿಲ್ಲ. ಈ ಚುನಾವಣೆ ನಡೆಯುತ್ತದೆಯೇ ಎಂಬ ಅನುಮಾನ ಇದಕ್ಕೆ ಕಾರಣ.
ಚುನಾವಣೆ ವೇಳಾಪಟ್ಟಿ ಒಂದು ಬಾರಿ ಘೋಷಣೆಯಾದರೆ ಯಾರೂ ಅದನ್ನು ಬದಲಾಯಿಸುವಂತಿಲ್ಲ ಎಂಬ ನಂಬಿಕೆ ಈ ಸಲ ಉಳಿದಿಲ್ಲ. ರಾಜ್ಯ ಸರ್ಕಾರದ ಮನವಿ ಮೇರೆಗೆ ಸುಪ್ರೀಂ ಕೋರ್ಟ್ ಎಂಟು ವಾರ ಚುನಾವಣೆಯನ್ನು ಮುಂದೂಡಿತ್ತು. ಅಲ್ಲದೇ, ಈ ಹಿಂದೆ ಸರ್ಕಾರಕ್ಕೆ ಮೂರು ತಿಂಗಳ ಅವಧಿಯನ್ನು ನೀಡಿತ್ತು. ಹೀಗಾಗಿ ಚುನಾವಣೆ ಅಧಿಸೂಚನೆ ಹೊರಟು ನಾಮಪತ್ರ ಸಲ್ಲಿಕೆಯಾಗುವ ದಿನ ಬರುವವರೆಗೂ ಬಿಬಿಎಂಪಿ ಚುನಾವಣೆ ನಡೆಯುವ ಸ್ಪಷ್ಟ ನಂಬಿಕೆ ಇಲ್ಲ. ಹೀಗಾಗಿ ಆಕಾಂಕ್ಷಿಗಳ ಲಾಬಿ ಇಲ್ಲದೇ ಮುಖಂಡರು ನೆಮ್ಮದಿಯಾಗಿದ್ದಾರೆ.
ಹೀಗಿದ್ದರೂ ಚುನಾವಣಾ ಪ್ರಕ್ರಿಯೆ ಸ್ಥಗಿತವಾಗಿಯೂ ಇಲ್ಲ. ಅಭ್ಯರ್ಥಿಗಳಿಗೆ ಅರ್ಜಿ ನೀಡುವ ಸ್ವೀಕರಿಸುವ ಪ್ರಕ್ರಿಯೆಗೆ ಕಾಂಗ್ರೆಸ್ ಮರು ಚಾಲನೆ ನೀಡಿದೆ. ಬಿಜೆಪಿಯಲ್ಲಿ ಅಂತಹ ಪ್ರಕ್ರಿಯೆ ನಡೆದಿಲ್ಲವಾದರೂ ತೆರೆಮರೆಯಲ್ಲಿ ಚಟುವಟಿಕೆಗಳಿವೆ. ಇನ್ನು ಜೆಡಿಎಸ್ ಅಂತೂ ಚುನಾವಣೆ ಆಗಲಿ ಎಂದು ತುದಿಗಾಲ ಮೇಲೆ ನಿಂತಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ತನ್ನ ಲಾಭಕ್ಕೆ ಪರಿವರ್ತಿಸುವುದು ಅದರ ಗುರಿ. ಅಭ್ಯರ್ಥಿ ಆಕಾಂಕ್ಷಿಗಳಿಗೆ ಅರ್ಜಿ, ಸದಸ್ಯರನ್ನಾಗಿಸುವ ಪುಸ್ತಕ ನೀಡುವುದನ್ನು ಮುಂದುವರಿಸಿದೆ.
ಆ.3 ರಂದು ಬಿಬಿಎಂಪಿ ಆಯುಕ್ತರು ಚುನಾವಣೆಯ ಅಧಿಸೂಚನೆ ಹೊರಡಿಸುತ್ತಾರೆ. ಅಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅಂದರೆ ಇನ್ನೂ 15 ದಿನಗಳಲ್ಲಿ ಏನು ಬೇಕಾದರೂ ಆಗಬಹುದು ಎಂಬ ಗುಮಾನಿಯೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ನೀರಸವಾಗಲು ಕಾರಣ. ಇನ್ನು ಬಿಬಿಎಂಪಿಯನ್ನು ಭಾಗ ಮಾಡಿಯೇ ತೀರುವುದಾಗಿ ಸಿ.ಎಂ ಸಿದ್ದರಾಮಯ್ಯ ಹೇಳಿದ್ದು, ಬಿಬಿಎಂಪಿ ಭಾಗ ಮಾಡುವ ವಿಚಾರ ಕಾಯ್ದೆಯಾದರೆ ಚುನಾವಣೆ ಏನಾಗುತ್ತದೋ ಎಂಬ ಆತಂಕ ಎಲ್ಲರಲ್ಲಿದೆ.
ಹೀಗಾಗಿ ವಿಧಾನಮಂಡಲದ ನಿರ್ಧಾರದ ಮೇಲೆ ಆಕಾಂಕ್ಷಿಗಳ ಚಟುವಟಿಕೆಯ ತೀವ್ರತೆ ಅವಲಂಬಿತವಾಗಿದೆ. ಈಗಿನ ಪ್ರಕಾರ ಜು.24 ವರೆಗೆ ಅಧಿವೇಶನ ನಡೆಯಲಿದೆ. ಅಲ್ಲಿಯವರೆಗೆ ಕಾಯಬೇಕೆಂದು ಸಾಕಷ್ಟು ಅಭ್ಯರ್ಥಿಗಳು ನಿರ್ಧರಿಸಿದ್ದು ವೇಳಾಪಟ್ಟಿ ಪ್ರಕಟವಾದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಚುನಾವಣಾ ಉತ್ಸಾಹ ಕಾಣುತ್ತಿಲ್ಲ.