ಬೆಂಗಳೂರು: ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ರಾಜ್ಯದಲ್ಲಿರುವ ಅನುದಾನಿತ ಶಾಲಾ-ಕಾಲೇಜುಗಳ ಉಪನ್ಯಾಸಕರಿಗೆ ವೇತನ ನಿಗದಿಪಡಿಸಬೇಕು ಮತ್ತು ಹೊರಟ್ಟಿ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ಸದಸ್ಯರು ರೈಲ್ವೆ ನಿಲ್ದಾಣನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ರ್ಯಾಲಿ ನಡೆಸಿದರು.
ನಾನಾ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಶಿಕ್ಷಕರು, ಉಪನುಆಸಕರು ರೈಲ್ವೆ ನಿಲ್ದಾಣದಿಂದ ಬೃಹತ್ ಜಾಥಾ ನಡೆಸಿ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಂಜೆವರೆಗೂ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷ ಡಿ.ಸಿ ಗೋಪಿನಾಥ್ ಮಾತನಾಡಿ ಅನುದಾನ ಶಾಲಾ-ಕಾಲೇಜು ಶಿಕ್ಷಕರು, ಉಪನ್ಯಾಸಕಾರಿಗೆ ವೇತನ ನೀಡುವಂತೆ ಸುಮಾರು ಹತ್ತು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಸರ್ಕಾರ ನ್ಯಾಯಾಲಯದ ಆದೇಶ ಜಾರಿಗೆ ಮುಂದಾಗಿಲ್ಲ. ಯಾವುದೇ ಸೌಲಭ್ಯ ಪಡೆಯದೆ ನಿವೃತ್ತಿ ಹೊಂದಿರುವವರಿಗೂ ನ್ಯಾಯಾಲಯದ ಆದೇಶದಂತೆ ಸೌಲಭ್ಯ ನೀಡಬೇಕು ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ವೇತನ ತಾರತಮ್ಯ ನಿವಾರಿಸಿ: ವೇತನ ತಾರತಮ್ಯ ಹಾಗೂ ತಮ್ಮ ಬೇಡಿಕೆಗೆ ಸ್ಪಂದಿಸಿದರೆ ಎಷ್ಟು ಖರ್ಚಾಗುತ್ತದೆ ಎಂಬೆಲ್ಲದರ ಬಗ್ಗೆ ಹೊರಟ್ಟಿ ವರದಿಯಲ್ಲಿ ವಿವರಿಸಲಾಗಿದೆ 2006 ರ ನಂತರ ಸೇವೆಯಲ್ಲಿರುವ ಎಲ್ಲಾ ಅನುದಾನಿತ ಶಾಲಾ-ಕಾಲೇಜು ಸಿಬ್ಬಂದಿಗೆ ಈ ಸೌಲಭ್ಯ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.