ವಿಧಾನಪರಿಷತ್ತು: ಕೇಂದ್ರದಿಂದ ಬರುವ ಅನುದಾನ ಪ್ರಮಾಣದಲ್ಲಿ ಕಡಿತವಾಗಿರುವುದರಿಂದ ರಾಜ್ಯದ ಬಜೆಟ್ ಗಾತ್ರ ಕಡಿಮೆಯಾಗಿದೆ ಎಂಬ ಮುಖ್ಯಮಂತ್ರಿಯವರ ಹೇಳಿಕೆ ಮೇಲ್ಮನೆಯಲ್ಲೂ ಗದ್ದಲಕ್ಕೆ ರಣವಾಯಿತು.
ಅಂತಿಮವಾಗಿ ಬಿಜೆಪಿ ಸದಸ್ಯರು ಮುಖ್ಯಮಂತ್ರಿಯವರ ಹೇಳಿಕೆ ಖಂಡಿಸಿ ಸದನದಿಂದ ಹೊರನಡೆದರು. 2015ನೇ ಸಾಲಿನ ಧನವಿನಿಯೋಗ ವಿಧೇಯಕಕ್ಕೆ ಅನುಮೋದನೆ ತೆಗೆದುಕೊಳ್ಳುವ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 14ನೇ ಹಣಕಾಸು ಆಯೋಗದಿಂದ ಶೇ.10ರಷ್ಟು ಹೆಚ್ಚುವರಿ ಅನುದಾನ ಬಂದಿತಾದರೂ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಾಕಷ್ಟು ಕಡಿಮೆಯಾಯಿತು. ಇದರಿಂದ ರಾಜ್ಯದ ಬೊಕ್ಕಸದಿಂದಲೇ ಈ ಯೋಜನೆಗಳಿಗೆ ಹಣ ಭರ್ತಿ ಮಾಡಿಕೊಳ್ಳಬೇಕಾಗಿದ್ದರಿಂದ, ನೀರಾವರಿ, ಲೋಕೋಪಯೋಗಿಯ ಯೋಜನೆಗಳಿಗೆ ಇನ್ನಷ್ಟು ಹಣ ನೀಡಲು ಸಾಧ್ಯವಾಗಲಿಲ್ಲ ಎಂದರು.
ಈ ವೇಕ್ಷೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಅಶ್ವತ್ಥನಾರಾಯಣ, ನಾರಾಯಣಸ್ವಾಮಿ, ಗಣೇಶ್ ಕಾರ್ಣಿಕ್, ವಿ. ಸೋಮಣ್ಣ, ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ, ಸದನದ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸತ್ಯ ಯಾವಾಗಲೂ ಕಹಿಯಾಗಿರುತ್ತದೆ, ನಾವು ಸತ್ಯ ಹೇಳಿದರೆ ಇವರು ಕೇಳಿಸಿಕೊಳ್ಳಲು ಸಿದ್ದರಿಲ್ಲ ಎಂದು ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಬಿಜೆಪಿ ಸದಸ್ಯರೆಲ್ಲಾ ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆಂದು ಘೋಷಣೆ ಕೂಗುತ್ತಾ ಸದನದಿಂದ ಹೊರನಡೆದರು.
ಹಣಕಾಸು ಸಚಿವರ ಬಳಿ ನಿಯೋಗ ಹೋಗಲು ಮುಖ್ಯಮಂತ್ರಿ ಒಪ್ಪಿಗೆ
ಬರುವ ಅನುದಾನದಲ್ಲಿ ಕಡಿತವಾಗಿ ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚಿಸೋಣ, ನೀವು ಬನ್ನಿ ಎಂಬ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪವರ ಆಹ್ವಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ.ನಾನು ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಂ ಅವರೊಂದಿಗೆ ಈ ವಿಚಾರವಾಗಿ ಮಾತನಾಡಿದ್ದು, ಅವರಿಬ್ಬರೂ ರಾಜ್ಯಕ್ಕೆ ಅನುದಾನ ಕಡಿತವಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಇಲ್ಲಿ ಸಿಎಂ ಅನುದಾನ ಕೊರತೆಯಾಗಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಕೇಂದ್ರ ಸಚಿವರೊಂದಿಗೆ ಸಭೆ ನಡೆಸೋಣ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಜ್ಯಕ್ಕೆ ಅನ್ಯಾಯವಾಗಿರುವುದು ಹೌದು, ಸಭೆ ಆಯೋಜಿಸಿ ಬರುತ್ತೇನೆಂದರು.