ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಸೋತರೆ ಸಚಿವಸ್ಥಾನದಿಂದ ವಜಾಗೊಳಿಸುವುದಾಗಿ 4 ಸಚಿವರಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಪಾಲಿಕೆಯಲ್ಲೂ ಅಧಿಕಾರ ಪಡೆಯಬೇಕು ಎಂದು ರಾಜ್ಯದ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಅಲ್ಲದೇ ಚುನಾವಣೆಯ ಪ್ರಚಾರ ಹಾಗೂ ಪಕ್ಷದ ಗೆಲುವಿನ ಹೊಣೆಯನ್ನು ಸಚಿವ ರಾಮಲಿಂಗಾರೆಡ್ಡಿ, ಕೃಷ್ಣಾ ಭೈರೇಗೌಡ, ಗೃಹ ಸಚಿವ ಜಾರ್ಜ್, ದಿನೇಶ್ ಗುಂಡೂರಾವ್ ಅವರಿಗೆ ವಹಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ನೀದುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಆಡಳಿತ ಪಕ್ಷವಾಗಿದ್ದರೂ ಕಾಂಗ್ರೆಸ್ ಗೆ ಬಿಬಿಎಂಪಿ ಚುನಾವಣೆ ಸುಲಭವಾಗಿ ಗೆಲ್ಲಳು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ತಿಂಗಳು ನಡೆಯುವ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಆಡಳಿತವಿರೋಧಿ ಕೂಗು ಎದುರಿಸುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ಮಹತ್ವದ್ದಾಗಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ 4 ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.