ಬೆಂಗಳೂರು: ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ ದೆಹಲಿಯಲ್ಲಿ ಪ್ರಬಲ ಬ್ಯಾಟಿಂಗ್ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರದರ್ಶಿಸಿದ್ದು ಮಾತ್ರ ಪಕ್ಕಾ ರಕ್ಷಣಾತ್ಮಕ ಆಟವನ್ನು. ತಮ್ಮ ಎರಡು ದಿನಗಳ ದೆಹಲಿ ಪ್ರವಾಸದಲ್ಲಿ ಸಿಎಂ ಪಕ್ಕಾ ಕ್ರೀಡಾಪಟುವಿನ ಮನಃಸ್ಥಿತಿ ಪ್ರದರ್ಶಿಸಿದ್ದಾರೆ.
ಹೈಕಮಾಂಡ್ ಕರೆ ಮೇರೆಗೆ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುತ್ತಾರೆಂಬ ವದಂತಿಗಳು ಗಾಢವಾಗಿದ್ದವು. ಆದರೆ ಸ್ವಪಕ್ಷದ ಬೆಳವಣಿಗೆಗಳನ್ನು ಬದಿಗಿಟ್ಟ ಅವರು ಕೇಂದ್ರ ಸರ್ಕಾರದ ಜತೆಗೆ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು. ಸಂಜೆ 7 ಗಂಟೆವರೆಗೂ ಸಿದ್ದರಾಮಯ್ಯ ದೆಹಲಿಯಲ್ಲೇ ಇದ್ದುದರಿಂದ ಅವರು ಸೋನಿಯಾ ಭೇಟಿಯಾಗಬಹುದೆಂಬ ನಿರೀಕ್ಷೆ ಬಲವಾಗಿತ್ತು. ಆದರೆ, ವಾಸ್ತವವಾಗಿ ಅವರು ಸೋನಿಯಾ ಭೇಟಿಗೆ ಸಮಯಾವಕಾಶವನ್ನೇ ಕೋರಿರಲಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆದಿಲ್ಲ.
ಬಿಬಿಎಂಪಿ ಚುನಾವಣೆ ಮುಕ್ತಾಯವಾಗುವ ವರೆಗೆ ಸಂಪುಟ ವಿಸ್ತರಣೆಯ ಜವಾಬ್ದಾರಿಯನ್ನು ಹೈಕಮಾಂಡ್ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಟ್ಟಿದೆ ಎಂದು ಗೊತ್ತಾಗಿದೆ. ಬೆಳಗ್ಗೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರ ವಿವಿಧ ಯೋಜನೆಗಳಲ್ಲಿ ಬಿಡುಗಡೆ ಮಾಡದೇ ಬಾಕಿ ಉಳಿಸಿಕೊಂಡಿರುವ ರು.139.67 ಕೋಟಿ ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಜೆ-ನರ್ಮ್ ಯೋಜನೆಯಲ್ಲಿ ರಾಜ್ಯ ಸರ್ಕಾರ ಸುಮಾರು 67 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿದ ಎಲ್ಲ ಮಾನದಂಡಗಳನ್ನು ಇಲ್ಲಿ ಪಾಲಿಸಲಾಗುತ್ತಿದೆ. 2014ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಕರ್ನಾಟಕವನ್ನು ಜೆ-ನರ್ಮ್ ಯೋಜನೆಯನ್ನು ಅತ್ಯಂತ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿರುವ ರಾಜ್ಯ ಎಂದು
ಮಾನ್ಯ ಮಾಡಿದೆ. ಹೀಗಾಗಿ ಬಾಕಿ ಹಣವನ್ನು ಶೀಘ್ರ ಮಂಜೂರು ಮಾಡುವ ಮೂಲಕ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಸಹಕರಿಸಬೇಕು ಎಂದು ವೆಂಕಯ್ಯ ನಾಯ್ಡು ಅವರಿಗೆ ಸಿದ್ದರಾಮಯ್ಯ ಮನವಿ ಪತ್ರ ಸಲ್ಲಿಸಿದರು.
ಇದರ ಜತೆಗೆ ಕೇಂದ್ರ ಕೃಷಿ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಸಕ್ಕರೆ ಬೆಲೆ ಸ್ಥಿರತೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಸಕ್ಕರೆ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕಿದ್ದರೆ ಕೇಂದ್ರ ಸರ್ಕಾರ ಕಾರ್ಖಾನೆ ಮಾಲೀಕರು ಮತ್ತು ರೈತರ ನೆರವಿಗೆ ಧಾವಿಸಬೇಕು. ಕಾರ್ಖಾನೆಗಳಿಗೆ ಸಬ್ಸಿಡಿ ಹೆಚ್ಚಿಸುವುದರ ಜತೆಗೆ ಕನಿಷ್ಠ 50 ಲಕ್ಷ ಟನ್ ವೈಟ್ ಶುಗರ್ ರಫ್ತಿಗೆ ಅವಕಾಶ ನೀಡಬೇಕು. 40 ಲಕ್ಷ ಟನ್ ಬಫರ್ ಸ್ಟಾಕ್ ಸಂಗ್ರಹಣೆಗೆ ಅವಕಾಶ ನೀಡಬೇಕು. ದಕ್ಷಿಣ ಭಾರತದಿಂದ ಕಬ್ಬನ್ನು ಉತ್ತರ ಭಾರತದ ಕಾರ್ಖಾನೆಗಳಿಗೆ ಸಾಗಾಟ ಮಾಡುವುದಕ್ಕೆ ರೈಲು ಸೇವೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.