ರಾಜಕೀಯ

ಬೆಟ್ಟಿಂಗ್ ದಂಧೆ ; ಹುಬ್ಳೀಲಿ ದಾಳಿ

Rashmi Kasaragodu

ಹುಬ್ಬಳ್ಳಿ /ಧಾರವಾಡ: ಕ್ರಿಕೆಟ್ ಬೆಟ್ಟಿಂಗ್‍ಗೆ ಸಹಕಾರ ನೀಡಿದ ಆರೋಪದಲ್ಲಿ ಅಮಾನತು ಗೊಂಡಿರುವ ಮೂವರು ಪೇದೆಗಳ ಮನೆಗಳಿಗೆ ಶನಿವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿದ ಸಿಐಡಿ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರು ತಂಡಗಳಲ್ಲಿ ಆಗಮಿಸಿದ್ದ ಸಿಐಡಿ ಅಧಿಕಾರಿಗಳು ಪೇದೆಗಳಾದ ವಿದ್ಯಾನಗರ ನಿವಾಸಿ ನರೇಂದ್ರ, ನವನಗರ ನಿವಾಸಿ ಮೃತ್ಯುಂಜಯ ಕಾಲವಾಡ ಹಾಗೂ ಧಾರವಾಡದಲ್ಲಿರುವ ಬಸವರಾಜ ಕೊರವರ ಅವರ ಮನೆಗೆ ಬೆಳಗ್ಗೆ 7 ಗಂಟೆಗೆ ದಾಳಿ ಮಾಡಿದ್ದು, 11 ಗಂಟೆವರೆಗೂ ತಪಾಸಣೆ ನಡೆಸಿದ್ದಾರೆ. ಪೇದೆ ನರೇಂದ್ರ ಅವರ ಮನೆಯಲ್ಲಿ ಮಹತ್ವದ ಡೈರಿ ಸಿಕ್ಕಿದ್ದು, ಅದರಲ್ಲಿ ಪ್ರತಿ ಠಾಣೆ ವ್ಯಾಪ್ತಿಯ ಕ್ರಿಕೆಟ್ ಬುಕ್ಕಿಗಳ ಹೆಸರು, ಮೊಬೈಲ್ ಸಂಖ್ಯೆ, ಹಣಕಾಸಿನ ಮಾಹಿತಿ ಮತ್ತು ಹಲವು ಮೊಬೈಲ್ ಸಂಖ್ಯೆಗಳು ಲಭ್ಯವಾಗಿವೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಅಮಾನತುಗೊಂಡಿರುವ ಡಿಸಿಪಿ ಹನು ಮಂತ ರಾವ್ ಅವರ ಮನೆಗೂ ಮುಂಜಾನೆ 5.30ಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದರು

ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಲ್ಲಣ ಹುಟ್ಟಿಸಿದ್ದರಿಂದ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ ಭಾನುವಾರ ನಗರಕ್ಕೆ ಆಗಮಿಸಿ, ಬೆಳಗ್ಗೆ 10 ಗಂಟೆಗೆ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಭಾನುವಾರ ನಗರದಲ್ಲಿ ವಾಸ್ತವ್ಯ ಮಾಡಲಿರುವ ಅವರು ಪ್ರಕರಣದ ಪೂರ್ವಾಪರ ಸೇರಿದಂತೆ ಸಮಗ್ರ ಮಾಹಿತಿ ಪಡೆಯಲಿದ್ದಾರೆ. ಈ ವೇಳೆ ಅಧಿಕಾರಿಗಳಿಗೂ ಎಚ್ಚರಿಕೆ ನೀಡಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹುಬ್ಬಳ್ಳಿಯ ಬೆಟ್ಟಿಂಗ್ ದಂಧೆ ಬಗ್ಗೆ ಸುವರ್ಣ ನ್ಯೂಸ್ ಸ್ಟಿಂಗ್ ಆಪರೇಶನ್ ಮಾಡಿತ್ತು. ಇದರಲ್ಲಿ ಸ್ವತಃ ಪೊಲೀಸ್ ಅಧಿಕಾರಿಗಳೇ ಶಾಮೀಲು ಆಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪೇದೆಗಳು ಮತ್ತು ಒಬ್ಬ ಡಿಸಿಪಿಯನ್ನು ಅಮಾನತು ಮಾಡಿತ್ತು.


ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ವ್ಯವಹಾರ ಕುರಿತಂತೆ ಸಮಗ್ರ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಈ ದಂಧೆಯಲ್ಲಿ ಸಾರ್ವಜನಿಕರೇ ಇರಲಿ, ಪೊಲೀಸ್ ಅಧಿಕಾರಿಗಳೇ ಇರಲಿ, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

SCROLL FOR NEXT