ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ ಅವಧಿಗೆ ಬಜೆಟ್ ಮಂಡಿಸಿದ್ದನ್ನು ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಜೆಟ್ ಮಂಡನೆ ಕೇವಲ ಸಾಧನೆಗಲ್ಲ, ಸಮಾಜದ ಎಲ್ಲರಿಗೂ ಸಮಾನ ಅನುದಾನ ಒದಗಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದರು.
ಮಂತ್ರಾಲಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸಾರಿ ಬಜೆಟ್ ನಲ್ಲಿ ದಲಿತರು ಮತ್ತು ಸಮಾಜದ ಕೆಳವರ್ಗದವರಿಗೆ ನಿಗದಿ ಮಾಡಿದ್ದ ಅನುದಾನ ವೆಚ್ಚ ಮಾಡುವಲ್ಲಿ ಸೋತಿದ್ದಾರೆ.
ಹೈ.ಕ.ಭಾಗದಲ್ಲಿ ಕಲಂ 371(ಜೆ) ಅಡಿ 50 ಸಾವಿರ ಹುದ್ದೆ ಭರ್ತಿಗೆ ಸಿಎಂ ಭರವಸೆ ನೀಡಿದ್ದರು. ಆದರೆ ಇದುವರೆಗೆ ವೇಗ ಪಡೆದಿಲ್ಲ ಎಂದು ಟೀಕಿಸಿದರು. ಬಜೆಟ್ ಮಂಡನೆ ಮಾಡುವಲ್ಲೇ ತೃಪ್ತಿ ಕಂಡುಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ನೀರಾವರಿ, ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಯೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ.
ಹಾಗಾಗಿ ಮಾ.13ರಂದು ಅವರು ಮಂಡಿಸಲಿರುವ ಬಜೆಟ್ ನಲ್ಲಿ ತಮಗೆ ಹೆಚ್ಚಿನದೇನೂ ನಿರೀಕ್ಷೆಯಿಲ್ಲ, ಜನತೆ ಕೂಡಾ ನಿರೀಕ್ಷಿಸುವಂತಿಲ್ಲ. ಅದೊಂದು ಸಾಮಾನ್ಯ ಬಜೆಟ್ ಆಗುವುದರಲ್ಲಿ ಸಂದೇಹವಿಲ್ಲ ಎಂದು ಲೇವಡಿ ಮಾಡಿದರು.