ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‍ನಲ್ಲಿ ಎಲ್ಲ ಇಲಾಖೆಗಳ ಬಗ್ಗೆಯೂ ಗಮನ ಹರಿಸಬೇಕು. ನೀರಾವರಿಗೆ ಹೆಚ್ಚಿನ ಪ್ರಾಮುಖ್ಯ ನೀಡುವ ಅವಶ್ಯಕತೆ ಇದೆ. ಕನಿಷ್ಠ ಪಕ್ಷ 30,000 ಕೋಟಿಯನ್ನಾದರೂ ನೀರಾವರಿಗೆ ಮೀಸಲಿಡಬೇಕು ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಸರ್ಕಾರ ಈ ಬಗ್ಗೆ ಗಮನಹರಿಸಲಿದೆ ಎಂಬ ವಿಶ್ವಾಸ ಇದೆ. ಗಮನ ಕೊಡದಿದ್ದರೆ ಮುಂದೇನು ಎಂಬ ಬಗ್ಗೆ ನಮ್ಮಪಕ್ಷ ಚಿಂತನೆ ನಡೆಸುತ್ತದೆ. ನೀರು ಅತಿ ಅವಶ್ಯ ವಸ್ತುವಾಗಿ ರುವುದರಿಂದ ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹೆಚ್ಚು ಅನುದಾನ ಬಿಡುಗಡೆ ಮಾಡುವುದರಿಂದ ಕಾಮಗಾರಿಗಳು
ತ್ವರಿತಗತಿಯಲ್ಲಿ ನಡೆಯುತ್ತವೆ ಎಂದು ಅಭಿಪ್ರಾಯ ಪಟ್ಟರು. ರಾಜ್ಯ ಸರ್ಕಾರಕ್ಕೆ ಕೈಗಾರಿಕೆ ಮೇಲೆ ಆಸಕ್ತಿಯೇ ಇಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಇದುವರೆಗೆ ಕೇವಲ ಮೂರು ಬಾರಿ ಮಾತ್ರ ಸಭೆ ಕರೆದಿದ್ದಾರೆ. ಇದು ಎಷ್ಟರಮಟ್ಟಿಗೆ ಅವರಿಗೆ ನಿರಾಸಕ್ತಿ ಇದೆ ಎಂಬುದನ್ನು ತೋರಿಸುತ್ತದೆ. ಕೇವಲ ಹೇಳಿಕೆ ನೀಡುವುದರಿಂದ
ಯಾವುದೂ ಅನುಷ್ಠಾನವಾಗುವುದಿಲ್ಲ ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.ಈ ಸರ್ಕಾರ ಕೈಗಾರಿಕೆಯನ್ನು ತೀವ್ರವಾಗಿ ನಿರ್ಲಕ್ಷಿಸುತ್ತಿ ರುವುದರ ಪರಿಣಾಮ ಇಂದು ಅನೇಕ ಕಂಪನಿಗಳು ರಾಜ್ಯಬಿಟ್ಟು ಆಂಧ್ರ, ತೆಲಂಗಾಣಗಳಂಥ ರಾಜ್ಯಗಳತ್ತ ಮುಖ ಮಾಡಿವೆ. ನಾವಾಗಿಯೇ ಬಂದು ನಮ್ಮಲ್ಲಿ ಹೂಡಿ ಎಂದು ಕೇಳಬೇಕಿಲ್ಲ. ಬಂದವರೊಂದಿಗೆ ಸರಿಯಾಗಿ ಚರ್ಚಿಸಿ,ಅವರು ಕೇಳುವ ಮೂಲ ಸೌಕರ್ಯ ಒದಗಿಸಿದರೆ ಸಾಕು. ಆ ಕೆಲಸವನ್ನೂ ಮಾಡುತ್ತಿಲ್ಲ ಎಂದು ಜಗದೀಶ್ ಶೆಟ್ಟರ್ ವಿಷಾದ ವ್ಯಕ್ತಪಡಿಸಿದರು.