ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿ ನಿಗೂಢ ಸಾವಿನ ಕುರಿತು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೋಸ್ಟ್ ಮಾರ್ಟಮ್ ವರದಿ ತಿರುಚಲು ಹೋಗಿದ್ದರು ಎಂದು ಆರೋಪಿಸಿದ್ದಾರೆ.
ಕಲಾಪದಲ್ಲಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಕುಮಾರ ಸ್ವಾಮಿ, ವಿಪಕ್ಷಗಳನ್ನು ಹೆದರಿಸಿ ಬಗ್ಗು ಬಡೀತಿವಿ ಅಂತ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಮೊಸಳೆ ಕಣ್ಣೀರು ಸುರಿಸಿ ರಾಜಕೀಯ ಎನ್ನುತ್ತಿದ್ದಾರೆ. ನಮಗೆ ಹೃದಯವಿದೆ ನಿಮ್ಮ ರೀತಿ ಕಲ್ಲು ಹೃದಯವಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.ಕೆ ರವಿ ಸಾವಿನ ಸುತ್ತ ಸಾಕಷ್ಟು ಅನುಮಾನಗಳಿವೆ. ಜನರು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಸರ್ಕಾರದ ತಪ್ಪಿಲ್ಲದಿದ್ದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ. ಇಲ್ಲವಾದರೆ, ರವಿ ಅವರ ಸಾವಿನ ಹಿಂದೆ ಸರ್ಕಾರದ ಕೈವಾಡವಿದೆ ಎಂಬ ಅನುಮಾನವನ್ನುಂಟು ಮಾಡುತ್ತದೆ ಎಂದು ಎಚ್ ಡಿಕೆ ಹೇಳಿದ್ದಾರೆ.