ಬೆಂಗಳೂರು: ಡಿನೋಟಿಫಿಕೇಶನ್ ಪ್ರಕಱಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
2007ರಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ್ದಾರೆಂದು ಎಂ.ಎಸ್ ಮಹದೇವ ಸ್ವಾಮಿ ಎಂಬುವರು ಆರೋಪಿಸಿ ಲೋಕಾಯುಕ್ತಗೆ ಖಾಸಗಿ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ದಾಖಲಿಸಿಕೊಂಡಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಆದೇಶಿಸಿತ್ತು. ವಿಶೇಷ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾ.ಎಚ್,ಬಿಳ್ಳಪ್ಪ ಅವರಿದ್ದ ಏಕಸದಸ್ಯ ಪೀಠವಾದ-ವಿವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ.
ವಿವಾದವೇನು?
2007ರಲ್ಲಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ಬಳಿ ಸರ್ವೇ ನಂ.128ರ 1.10 ಎಕರೆ ಮತ್ತು 137ರ 1.14 ಎಕರೆ ಡಿನೋಟಿಫಿಕೇಶನ್ ಮಾಡಿ ಆದೇಶ ಹೊರಡಿಸಿದ್ದರು.
ಇದು ಕಾನೂನು ಬಾಹಿರ ಎಂದು ಆರೋಪಿಸಿ ಎಂ.ಎಸ್ ಮಹದೇವಸ್ವಾಮಿ ಲೋಕಾಯುಕ್ತದಲ್ಲಿ 2012ರ ಮಾ.1ರಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 3 ಮತ್ತು 4ರಲ್ಲಿ ಪ್ರಕಱಣ ದಾಖಲಾಗಿತ್ತು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ಈ ದೂರು ದುರುದ್ದೇಶದ್ದು, ರಾಜಕೀಯ ಪ್ರೇರಿತವಾಗಿದೆ. 2007ರ ಡಿನೋಟಿಫಿಕೇಶನ್ ಅನ್ನು ಪ್ರಶ್ನಿಸಿ 2012ರಲ್ಲಿ ದೂರು ದಾಖಲಿಸಿದ್ದಾರೆ. ಆದ್ದರಿಂದ ಈ ಪ್ರಕಱಣ ರದ್ದುಗೊಳಸಬೇಕೆಂದು ಕುಮಾರಸ್ವಾಮಿ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದರು.