ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಪ್ರತಿಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಲ್ಪಿ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸದನದಲ್ಲಿ ಕಾಲಹರಣ ಮಾಡಬಾರದು ಎಂಬ ಉದ್ದೇಶದಿಂದ ನಾವು ಅವರ ಹೇಳಿಕೆ ವಿರುದ್ಧ ಸದನದಲ್ಲಿ ಪ್ರತಿಭಟಿಸಲಿಲ್ಲ. ಆದರೆ ಡಿ.ಕೆ.ರವಿ ಅವರು ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ 44 ಬಾರಿ ದೂರವಾಣಿ ಕರೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಸಿಎಂ ಅದನ್ನು ಸಾಬೀತುಪಡಿಸಿದರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಕುಮಾರಸ್ವಾಮಿ ಸವಾಲು ಹಾಕಿದರು.
ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬುದು ಬರೀ ಪ್ರತಿಪಕ್ಷಗಳ ಒತ್ತಾಯ ಆಗಿರಲಿಲ್ಲ. ಇದು ರಾಜ್ಯದ ಆರು ಕೋಟಿ ಜನರ ಆಗ್ರಹವಾಗಿತ್ತು. ಆದರೆ ಮುಖ್ಯಮಂತ್ರಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಕಾಂಗ್ರೆಸ್ ಹೈಕಮಾಂಡ್ ಆದೇಶಕ್ಕೆ ಮಣಿದಿದ್ದಾರೆ ಎಂದು ಎಚ್ಡಿಕೆ ಆರೋಪಿಸಿದರು.
ಇಂದು ವಿಧಾನಸಭೆಯಲ್ಲಿ ಡಿ.ಕೆ.ರವಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾಗಿ ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಹಾಗೂ ಜೆಡಿಎಸ್ ಸಾವಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿವೆ. ರವಿ ಪೋಷಕರನ್ನು ಕರೆತಂದು ಧರಣಿ ಮಾಡಿಸುವ ಮೂಲಕ ಪ್ರತಿಪಕ್ಷಗಳು ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.