ವಿಧಾನಪರಿಷತ್ತು: ಬಜೆಟ್ ಮೇಲಿನ ಚರ್ಚೆ ಕುರಿತಾಗಿ ಮುಖ್ಯಮಂತ್ರಿಯವರ ಉತ್ತರದ ನಂತರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ವಿಫಲವಾದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರು ಆರೋಪ ಮಾಡುತ್ತಾ ಸಭಾತ್ಯಾಗ ನಡೆಸಿದ ಪ್ರಸಂಗ ನಡೆಯಿತು.
ಬಜೆಟ್ ಮೇಲಿನ ಚರ್ಚೆಯ ತರುವಾಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಉತ್ತರ ನೀಡಿದರು. ಮೇಲ್ಮನೆಯ ಸದಸ್ಯರನೇಕರು ಎತ್ತಿದ ಪ್ರಶ್ನೆಗಳಿಗೆ ಅಂಕಿ ಅಂಶ ಸಹಿತ ಉತ್ತರ ನೀಡಿದರು. ಕಳೆದ ಬಾರಿ ಇಟ್ಟ ಹಣ ಪೂರ್ತಿಯಾಗಿ
ಖರ್ಚು ಮಾಡಿಲ್ಲ, ರಾಜಸ್ವ- ತೆರಿಗೆ ಸಂಗ್ರಹ ಸರಿಯಾಗಿಲ್ಲ, ಆದ್ಯತಾ ಕ್ಷೇತ್ರಕ್ಕೆ ಈ ಬಾರಿ ಕಡಿಮೆ ಹಣ ನೀಡಲಾಗಿದೆ ಎಂಬಿತ್ಯಾದಿ ಅಂಶಗಳನ್ನು ಪ್ರಮುಖವಾಗಿ ತೆಗೆದುಕೊಂಡು ಉತ್ತರ ನೀಡಿ, ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ ಎಂದು ಸಮರ್ಥಿಸಿಕೊಳ್ಳುವ ಜೊತೆಗೆ ನೆರೆ ರಾಜ್ಯಗಳಿಗಿಂತ ತೆರಿಗೆ ಸಂಗ್ರಹ, ಪ್ರಗತಿಯಲ್ಲಿ ಮುಂದಿರುವುದಾಗಿ ಹೇಳಿಕೊಂಡರು.
ಕೋಲಾರಕ್ಕೆ ಎತ್ತಿನಹೊಳೆ ಯೋಜನೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೆ ನೀರಾವರಿ ಕಲ್ಪಿಸುವ ಸರ್ಕಾರ ನೀಡಿರುವ ಆದ್ಯತೆಯನ್ನು ಪ್ರಸ್ತಾಪಿಸಿದ ಸಿಎಂ, ಆಡಳಿತ ಪಕ್ಷದ ಸದಸ್ಯ ವೈ.ನಾರಾಯಣಸ್ವಾಮಿಯವರನ್ನು ಸಮಾಧಾನಪಡಿಸಿದರು. ಸಿಎಂ ಉತ್ತರಕ್ಕೆ ಪ್ರತಿಯಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಕಳೆದ ಬಾರಿಯ ಬಜೆಟ್‍ನ 10 ತಿಂಗಳ ಅಂಕಿಅಂಶ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಸಿಎಂ ಸಮರ್ಥ ನೀಯ ಉತ್ತರ ನೀಡುತ್ತಿದ್ದಂತೆ ಈಶ್ವರಪ್ಪನವರ ಗಂಟಲು ಕಟ್ಟಿದಂತಾಯಿತು.
ಕೊನೆಗೆ ಶ್ವೇತಪತ್ರ ಹೊರಡಿಸಿ ಎಂದು ಬೇಡಿಕೆ ಇಟ್ಟರು. ಬಜೆಟ್ಟೇ ಒಂದು ಶ್ವೇತಪತ್ರವಿದ್ದಂತೆ ಎಂದು ಸಿಎಂ ಉತ್ತರಿಸಿದಾಗ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಈಶ್ವರಪ್ಪ ಬಳಿ ಯಾವುದೇ ಅಸ್ತ್ರಸಿಗದಾಯಿತು. ಹೇಳಿದ್ದನ್ನೇ ಪುನಃಪುನಃ ಹೇಳುತ್ತಾ ಸಭಾತ್ಯಾಗ ನಡೆಸಿಯೇ ಬಿಟ್ಟರು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಮೂರುನಾಮ, ಕೊನೆಗೆ ಕಾಂಗ್ರೆಸ್ ಪಕ್ಷಕ್ಕೂ ಮೂರುನಾಮ ಎಂದು ಕೂಗುತ್ತಾ ಈಶ್ವರಪ್ಪ ಹೊರನಡೆದರು. ಇದರಿಂದ ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ, ಬಡವರಿಗೆ ನಾಮ ಹಾಕೋರೇ ಇವರು ಎಂದು ಬಿಜೆಪಿಯನ್ನು ಟೀಕಿಸಿದರು.
ಸಾರಾಯಿ ಭಾಗ್ಯ ಇಲ್ಲ: ಸಿಎಂ
2007ರಲ್ಲಿ ಸಾರಾಯಿ ನಿಲ್ಲಿಸಿ ಮಹಿಳೆಯರ ಕಣ್ಣೀರು ಒರೆಸುತ್ತೇವೆಂದರು. ಆದರೆ, ಮದ್ಯ ಸೇವನೆ ಪ್ರಮಾಣ ಕಡಿಮೆಯಾಗಿಲ್ಲ. 10-12 ರುಪಾಯಿಕೊಟ್ಟು ಮದ್ಯ ಸೇವಿಸುತ್ತಿದ್ದವರು ಇಂದು 100-200 ಕೊಟ್ಟು ಕುಡಿಯಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದರು. ಹಾಗೆಯೇ ರಾಜ್ಯದಲ್ಲಿ ಯಾವುದೇ ಕಾರಣಕ್ಕೆ ಪುನಃ ಸಾರಾಯಿ ತರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಅಕ್ರಮ ಮದ್ಯ ನಿಯಂತ್ರಿಸಲು ಅಬಕಾರಿ ಮತ್ತು ಪೊಲೀಸ್ ಎರಡೂ ಇಲಾಖೆಗೆ ಅವಕಾಶವಿದೆ. ಆದರೆ, ಕುರಿಕಾಯೋ ತೋಳಾ ಅಂದ್ರೆ, ಸಂಬಳವೇ ಬೇಡ ಅಂತಂತೆ ಎಂದು ಪರಿಸ್ಥಿತಿಯನ್ನು ಗಂಭೀರರವಾಗಿ ಅವಲೋಕಿಸಿದರು.