ನಾವ್ ಯಾಕ್ ಮರೆಯೋಣ, ನೋವುಂಡಿದ್ದೀವಿ: ಸಿದ್ದು
ಪದ್ಮನಾಭನಗರದಿಂದ ಸೂಚನೆ ಪಡೆದಿದ್ರೆ ನಿಮ್ಮ ಪಕ್ಷದಲ್ಲೇ ಇರ್ತಿದ್ದೆ
ವಿಧಾನಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರಕ್ಕೆ ಮತ್ತೊಮ್ಮೆ ವಿಧಾನಸಭೆ ಕಲಾಪ ವೇದಿಕೆಯಾಯಿತು.
ರಾಜಕೀಯದ ಆಲಾಪಗಳನ್ನು ಪರಸ್ಪರ ಹೊರಗೆ ಹಾಡುತ್ತಿದ್ದಕ್ಕೆ ಹೊರತಾಗಿ ಸದನವನ್ನೇ ಹಾಲಿ-ಮಾಜಿ ಸಿಎಂಗಳು ಉಪಯೋಗಿಸಿಕೊಂಡು ತಮ್ಮ ರಾಜಕೀಯದ ಮೇಲಾಟಗಳ ಪ್ರಸಂಗಗಳನ್ನು ಪ್ರದರ್ಶಿಸಿದರು. ಬಜೆಟ್ ಚರ್ಚೆ ಮೇಲೆ ಉತ್ತರ ನೀಡಲು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಬಜೆಟ್ ಅನ್ನು `ಬೂಸಾ' ಎಂದು ಮೂದಲಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ರಾಜರ ಕಾಲದಲ್ಲಿ ಮೇಲ್ವರ್ಗದವರ ಪ್ರಾಚೀನ ಸಾಹಿತ್ಯಕ್ಕೆ ಸೀಮಿತವಾಗಿದ್ದ ಸಾಹಿತ್ಯವನ್ನು ಬಸವಲಿಂಗಪ್ಪ ಅವರು `ಬೂಸಾ' ಎಂದು ಕರೆದಿದ್ದರು. ದಮನಕ್ಕೆ ಒಳಗಾಗಿದ್ದವರ ನೋವು, ಅವಮಾನ, ದೌರ್ಜನ್ಯ, ಕಷ್ಟಕಾರ್ಪಣ್ಯಗಳನ್ನು ಸಾಹಿತ್ಯದಲ್ಲಿ ಕಾಣದಿದ್ದಾಗ ಹೀಗೆಂದಿದ್ದರು.
ಅದನ್ನು ಕುವೆಂಪು, ಅನಂತಮೂರ್ತಿ, ಲಂಕೇಶ್ ಎಲ್ಲರೂ ಒಪ್ಪಿದ್ದರು. ಆದರೆ, ಎಕಾನಾಮಿಕ್ ಸರ್ವೆ ಪುಸ್ತಕ ಇಟ್ಟುಕೊಂಡು `ಬೂಸಾ' ಎಂದು ಕುಮಾರಸ್ವಾಮಿ ಹೇಳಿದ್ದು ಸಮಂಜಸವಲ್ಲ ಎಂದರು. ಕುಮಾರಸ್ವಾಮಿ ಸದನದಲ್ಲಿ ಇರಲಿಲ್ಲ. ಅವರು ಬಂದಾಗ ಮತ್ತೆ ಇದನ್ನೇ ಪ್ರಸ್ತಾಪಿಸಿ, `ಬೂಸಾ' ಎಂದಿದ್ದನ್ನು ವಾಪಸ್ ಪಡೆಯಬೇಕು ಎಂದು ಸಿಎಂ ಆಗ್ರಹಿಸಿದರು.
ಸಿದ್ದು: ಕುಮಾರಸ್ವಾಮಿ ಒಂದು ಮಾತನ್ನು ಹೇಳಿದ್ದಾರೆ. ಹಿಂದೆ ಬಜೆಟ್ ಎಲ್ಲ ಸರ್ ಪ್ಲಸ್, ಫಿಸಿಕಲ್ ಡಿಪಿಸಿಟ್ ಕಡಿಮೆ ಇರುತ್ತಿತ್ತು ಎಂದೆಲ್ಲ ಹೇಳಿದ್ದಾರೆ. ಆದರೆ ಈಗ ಅದೆಲ್ಲ ಕಾಣ್ತಾ ಇಲ್ಲ. ಇನ್ನೊಂದು ಮಾತು ಹೇಳಿದ್ದಾರೆ. ನಾನು ಇಲ್ಲಿ ಇರಲಿಲ್ಲ. ನನ್ನ ಸ್ನೇಹಿತರು ಹೇಳಿದ್ದಾರೆ. ಹಿಂದೆ ಎಲ್ಲ ಪದ್ಮನಾಭನಗರದಿಂದ ಇನ್ ಸ್ಟ್ರಕ್ಷನ್ ಬರ್ತಾ ಇತ್ತು. ನೀವೇ ಹೇಳಿರೋದು.
ಎಚ್‍ಡಿಕೆ: ನೀವು ನನ್ನ ಸರ್ಕಾರಕ್ಕೆ ಹೇಳಿದ್ರಲ್ಲಾ, ಅದನ್ನ ಕೋಟ್ ಮಾಡಿದ್ದೆ ಅಷ್ಟೇ.
ಸಿ: ಅದಕ್ಕೆ ನಾನು ನಿಮಗೆ ಉತ್ತರ ಹೇಳ್ತಾ ಇರೋದು.
ಕು: ಹಿಂದಿನದ್ದೆಲ್ಲ ಮರೆಯಬೇಡಿ.
ಸಿ: ನಾವು ಹಿಂದಿನದ್ದೆಲ್ಲ ಮರೆಯಲ್ಲ, ಯಾಕ್ ಮರೆಯೋಣ? ನೋವುಂಡೋರು ಯಾವತ್ತೂ ಮರೆಯಲ್ಲ. ಒಂದು ವೇಳೆ ಪದ್ಮನಾಭ ನಗರದಿಂದ ಬಂದಿದ್ದ ಇನ್‍ಸ್ಟ್ರಕ್ಷನ್ ತಗೊಂಡಿದ್ರೆ ನಾನು ನಿಮ್ಮ ಪಾರ್ಟೀಲೇ ಇರ್ತಿದ್ದೆ ಅಲ್ವಾ? ನಾನು ಸದಸ್ಯತ್ವದಿಂದಲೇ ಡಿಸ್‍ಮಿಸ್ ಆಗ್ತಿದ್ನೋ? ನೀವು ಮಾತಾಡಿದ್ದೀರಲ್ರೀ. ನೀವು ರಾಜಕೀಯ ಮಾತಾಡ ಬಹುದು, ನಾನು ಮಾತಾಡಬಾರದಾ?
ಕು: ನೀವು ಬಿಡಲಿಲ್ಲಾ ಹೇಳೋಕೆ?
ಸಿ: ನಾನು ಮಾತಾಡಿದ್ರೆ ಕೋಪ ಯಾಕೆ? ಇನ್ನೂ ಒಂದು ಮಾತು ಹೇಳಿದ್ದೀರಾ? 2004ರಲ್ಲಿ ಸಿಎಂ ಆಗೋ ಸಂದರ್ಭದ ಬಗ್ಗೆ ಸೋನಿಯಾ ಗಾಂಧಿ, ಅಹಮದ್ ಪಟೇಲ್‍ನ ಕೇಳಬೇಕು ಎಂದಿದ್ದೀರಾ? ಅವರನ್ನು ಕೇಳಿಸಬೇಕಲ್ವಾ? ಬೇರೆಯವರು ಸಾಕ್ಷಿ ಇದ್ದಾರಲ್ವಾ? ಸಿಂಧ್ಯ ಬದುಕಿದ್ದಾರೆ, ಸಿಎಂ ಇಬ್ರಾಹಿಂ ಇದ್ದಾರೆ. ಎಂಪಿ ಪ್ರಕಾಶ್ ಇಲ್ಲ. ದೇವೇಗೌಡರು ಇದ್ದಾರೆ, ನಾನು ಬದುಕಿದ್ದೇನೆ. ಶರದ್ ಪವಾರ್ ಬದುಕಿದ್ದಾರೆ. ನೀವು ಇರಲಿಲ್ಲ ಅಲ್ಲಿ, ಯು ಆರ್ ನಾಟ್ ದೇರ್. ನೀವು ಮನೆಯಲ್ಲಿ ಇದ್ರೀ.
ಕು: ಅದಕ್ಕೇ ಹೇಳಿದ್ದು, ಐದು ನಿಮಿಷ ಇದ್ದಿದ್ದರೆ ಎಲ್ಲ ಸರಿ ಆಗ್ತಿತ್ತು.
ಸಿ: ಈ ನಾವು ಒಂದು ಕೆಲ್ಸ ಮಾಡೋಣ, ನಾವು ನೀವು ಸೇರಿಕೊಳ್ಳೋಣ.
ಕು: ನಾನು ನೀವು ಸೇರಿಕೊಂಡ್ರೆ ಏನೂ ಆಗಲ್ಲ.
ಸಿ: ಸಿಂಧ್ಯ, ಇಬ್ರಾಹಿಂ ಅವರನ್ನ ಸೇರಿಸೋಣ, ಶರದ್ ಪವಾರ್ ಹತ್ತಿರಾ ಹೋಗೊಣ. ದೇವೇಗೌಡರು, ನಾನು ಎಲ್ಲ ಹೋಗೋಣ. ತಮಾಷೆ ಆಗಲು ಮಾತಾಡ್ತಾ ಇಲ್ಲ. ಸತ್ಯ ಗೊತ್ತಾಗಬೇಕು ಅಂತಾ ಮಾತಾಡ್ತಾ ಇರೋದು. ಚರ್ಚೆ ಆರೋಗ್ಯಕರವಾಗೇ ಇರಬೇಕು. ನಾನೇನು ದುರುದ್ದೇಶದಿಂದ ಹೇಳಿದ್ದೀರಿ ಅಂದೆನಾ?ಸತ್ಯ ಗೊತ್ತಾಗಬೇಕು, ನೀವೇ ಹೇಳಿದ್ರಲ್ಲಾ ಕುಮಾರಸ್ವಾಮಿ. ನೀವು ಮುಖ್ಯಮಂತ್ರಿ ಆಗದ್ದಕ್ಕೆ ನಾನೇ ಕಾರಣ ಅಂತಾ.
ಕು: 1998ರಲ್ಲಿ ನಾನು ಹೇಳಿದ್ದಲ್ಲ. ಆಗ ನಾನೇ ನೀವು ಸಿಎಂ ಆಗಲಿ ಅಂತಾ ಸಹಿ ಮಾಡಿದ್ದೆ.
ಸಿ: ನಿಮಗೆ ಗೊತ್ತಿಲ್ಲ ಸುಮ್ನಿರಿ ಕೃಷ್ಣಪ್ಪ ಅವ್ರೇ. ಇದು ರಿಲವೆಂಟ್ ಅಲ್ಲ ಅಂತಾ ನನಗೆ ಗೊತ್ತಿದೆ. ಪ್ರಸ್ತಾಪವನ್ನೂ ಮಾಡುತ್ತಿಲ್ಲ. ಬಜೆಟ್‍ನಲ್ಲಿ ನಾನು ರಾಜಕೀಯ ಮಾತನಾಡೇ ಇಲ್ಲ. ರಾಜ್ಯಪಾಲರ ಭಾಷಣದ ಮೇಲೆ ಮಾಡುವಾಗ ಮಾತನಾಡಿದ್ದೆ ಅಷ್ಟೇ.
ಕು: ಮಾತಾಡಿದ್ರೀ,
ಸಿ: ಅದಕ್ಕೇ ನೀವು ಮಾತಾಡಿದ್ರಾ
ಕು: ನಿಮ್ಮ ಮಾರ್ಗದರ್ಶನ.
ಸಿ: ನನ್ನ ಮಾರ್ಗದರ್ಶನ ತಗೊಂಡಿದ್ರೆ, ಅವರು ವಿರೋಧನೇ ಆಗ್ತಾ ಇರಲಿಲ್ಲ. ಹೋಗ್ಲಿ ಬಿಡಿ, ಶರದ್ ಪವಾರ್ ಹತ್ರ ಹೋಗಿದ್ದಾಗ, ದೇವೇಗೌಡರು ನಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ರು. ನೀವೇ ಸಿಎಂ ತಗೊಳ್ಳಿ ಎಂದ್ರು. ಪವಾರ್ ಎನ್‍ಸಿಪಿ ಆಗಿದ್ರೂ ಮೇಡಂ ಜತೆ ಮಾತಾಡಿಕೊಂಡು ಬಂದಿದ್ರು. ಬೇಕಾದ್ರೆ ದೇವೇಗೌಡ್ರು ಒಂದಿಸ ಸಿಕ್ಕಿದ್ರೆ ಮಾತಾಡೋಣ ಬಿಡ್ರಿ. ಆಗ ಅದಕ್ಕೆ ದೇವೇಗೌಡರು ಏನು ಹೇಳಿದ್ರು, ನಾವು ಕೃಷ್ಣರ ವಿರುದ್ಧ ಚಾರ್ಚ್‍ಶೀಟ್ ಕೊಟ್ಟುಬಿಟ್ಟಿದ್ದೀವಿ. ಸಿಎಂ ಬೇಡ ಅಂತಾ ಹೇಳಿಬಿಟ್ರು. ನಮಗೆ ಬರೀ ಡಿಸಿಎಂ ಸಾಕು ಎಂದ್ರು. ಅದಕ್ಕೆ ಪಾಪ ಕುಮಾರಸ್ವಾಮಿ ಕಾರಣ ಅಲ್ಲ.
ಕು: ನೀವು ಹೇಳಿಕೆ ಕೊಟ್ಟ ಮೇಲೆ ದೇವೇಗೌಡರನ್ನುಈ ಬಗ್ಗೆ ಕೇಳಿದೆ. ಅದಕ್ಕೆ ಅವರು ಎಲ್ಲ ಸುಳ್ಳು ಎಂದ್ರು.
ಸಿ: ಸಿಂಧ್ಯ, ನಿಮ್ಮ ಪಾರ್ಟಿಯಲ್ಲಿ ಇದ್ದಾರಲ್ಲ ಕರೆದು ಕೇಳಿ. ನಿಮ್ಮ ಪಾರ್ಟಿಲಿ ಇಲ್ವಾ? ಬಿಟ್ಟುಬಿಟ್ರಾ? ಮೊನ್ನೆ ತಾನೇ ಸಿಕ್ಕಿದ್ದಾಗ ನಾನು ಜೆಡಿಎಸ್‍ನಲ್ಲೇ ಇದ್ದೀನಿ ಆಕ್ಟೀವ್ ಆಗಿಲ್ಲ ಅಂದಾ?
ಕು: ಸಿಂಧ್ಯ ನಮ್ಮ ಪಾರ್ಟಿ ಅಲ್ಲ. 2004ರಲ್ಲಿ ಸಿಎಂ ಕೊಡ್ತೀವಿ ಅಂತಾ ಹೇಳಿದ್ರಾ ಸ್ಪೀಕರ್ ಅವರೇ?
ಸಿ: ಪಾಪ ಅವರಿಗೇನು ಗೊತ್ತು, ಅವರು ಇಲ್ಲಿದ್ರು. ಸೋನಿಯಾ ಗಾಂಧಿ ತೀರ್ಮಾನ ಮಾಡಿದ್ದು.
ಕು: ಅದಕ್ಕೇ ಸೋನಿಯಾ ಗಾಂಧಿ ಹೇಳಿದ್ರೆ ಎಲ್ಲ ಹೊರಗೆ ಬರುತ್ತದೆ.
ಸಿ: ಈಗ, ಸೋನಿಯಾಗಾಂಧಿ ತೀರ್ಮಾನ ಮಾಡ್ದಿದ್ರೆ, ನಾನ್ಹೇಗೆ ಸಿಎಂ ಆಗುತ್ತಿದ್ದೆ? ನಡೆದಿದ್ದು ಇದು. ಪಾಪ ರೇವಣ್ಣ ಇಲ್ಲ ಇಲ್ಲಿ. 1996ರಲ್ಲಿ ರೇವಣ್ಣ ಮತ್ತು ವಿ. ಸೋಮಣ್ಣ ಇಬ್ಬರೂ ಸೈನ್ ಮಾಡಿಸಿದ್ರು ಇವರೇ, ಸಿಎಂ ಆಗಲು.
ಕು: ಅವತ್ತು ನಾನು ಎಂಪಿ ಆಗಿದ್ದೆ. ನೀವು ಸಿಎಂ ಆಗಲಿ ಅಂತಾ ನಾನು ಸಹಿ ಹಾಕಿಸಿದ್ದೆ.
ಸಿ: ನಿಮಗೆ ಪೂರ್ಣ ಮಾಹಿತಿ ಇಲ್ಲ ಹಂಗಾದ್ರೆ. ವಯಸ್ಸಿನಲ್ಲಿ ನೀವು ನನಗಿಂತ ಚಿಕ್ಕವರಿದ್ದೀರಿ.
ಕು: 1995ರಿಂದ ಎಲ್ಲ ಮಾಹಿತಿ ಇದೆ. ಜ್ಞಾಪಕ ಇದೆ.
ಸಿ: ಮಾಹಿತಿ ಇಲ್ಲಾ ಅಂದ್ರೆ, ಜ್ಞಾಪಕ ಇಲ್ಲಾ ಅಂತಾ ಅಲ್ಲ. ಅವತ್ತು ಪಾಪ ರೇವಣ್ಣ ಅವರು, ಅದಕ್ಕೆ ಅವನ ಮೇಲೆ ಬಹಳ ಪ್ರೀತಿ. ನಾನು ಮುಖ್ಯಮಂತ್ರಿ ಆಗಲಿಲ್ಲ ಅಂತಾ ಅತ್ತುಬಿಟ್ರು 96ರಲ್ಲಿ. ನಾನೇನು ಸುಳ್ಳು ಹೇಳುತ್ತಿಲ್ಲ. ಅವರನ್ನೇ ಕೇಳಿ. ಆಯ್ತು ಬಿಡಿ, ನಾನು ಆಗ್ಲಿಲ್ಲಾ, ಹೋಯ್ತು. ಈಗಂತೂ ಕಾಂಗ್ರೆಸ್ ಪಾರ್ಟಿಯಿಂದ ಮುಖ್ಯಮಂತ್ರಿ ಆಗಿದ್ದೀನಿ. ಕುಮಾರಸ್ವಾಮಿ ಅವರು ಪ್ರಸ್ತಾಪ ಮಾಡಿದ್ರು ಅಂತಾ ಇದೆಲ್ಲ ಹೇಳಿದ್ದೇನೆ. ಇಲ್ಲದಿದ್ದರೆ ಇದೆಲ್ಲ ಹೇಳ್ತಾ ಇರಲಿಲ್ಲ. ನಾನು ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದವರಿಗೆಲ್ಲ ನಾನು ಕೃತಜ್ಞತೆ ಸಲ್ಲಿಸುತ್ತೇನೆ.