ಬೆಂಗಳೂರು : ರಾಜ್ಯದಲ್ಲಿ ಸಾಕಷ್ಟು ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ, ಆದರೆ ಹಾಲಿ ಸಿಎಂ ಸಿದ್ದರಾಮಯ್ಯ ಅವರಷ್ಟು ಧಿಮಾಕು-ಸೊಕ್ಕಿರುವ ಮುಖ್ಯಮಂತ್ರಿಯನ್ನು ತಾವು ಈವರೆಗೂ ನೋಡಿಲ್ಲ ಎಂದು ಮಾಜಿ ಸಿ.ಎಂ, ಸಂಸದ ಯಡಿಯೂರಪ್ಪ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್, ಬೆಂಗಳೂರು ವರದಿಗಾರರ ಕೂಟ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ತಮ್ಮ ಸರ್ಕಾರದ ಸಾಧನೆ ಶೂನ್ಯ ಎಂದು ಗೊತ್ತಿರುವುದರಿಂಡಲೇ ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸುವ ಬದಲು ಬಿಜೆಪಿ, ನರೇಂದ್ರ ಮೋದಿ ಅವರನ್ನು ಟೀಕಿಸಲು ದಾವಣಗೆರೆ ಸಮಾವೇಶವನ್ನು ಮೀಸಲಿಟ್ಟರು ಎಂದು ಲೇವಡಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಖರ್ಗೆ, ಸಿದ್ದರಾಮಯ್ಯನವರ ಶಾಬ್ಬಾಸ್ ಗಿರಿ ಬೇಕಿಲ್ಲ ಎಂದಿರುವ ಸಂಸದ ಯಡಿಯೂರಪ್ಪ, ಯುಪಿಎ ಸರ್ಕಾರದ ಒಟ್ಟಾರೆ 10 ವರ್ಷದ ಆಡಳಿತ ಹಾಗೂ ಬಿಜೆಪಿ ಸರ್ಕಾರದ ಒಂದು ವರ್ಷದ ಆಡಳಿತದ ಬಗ್ಗೆ ಚರ್ಚೆಗೆ ಅಹ್ವಾನಿಸಿದ್ದು ಜನರಿಗೆ ಸತ್ಯಾಂಶ ತೊಳಿಸೋಣ ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಚೀನಾ ಪ್ರವಾಸಕ್ಕೆ ಬನ್ನು ಎಂದು ಸ್ವತಃ ಪ್ರಧಾನಿಯೇ ಕರೆದರೂ ಹೋಗಲಿಲ್ಲ, ಆದರೂ ಪ್ರಧಾನಿಯೇ ರಾಜ್ಯ ಸರ್ಕಾರದ ಪರವಾಗಿ ಚೀನಾದೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಎಷ್ಟು ಹೂಡಿಕೆಯಾಗಿದೆ? ಎಷ್ಟು ಬಂಡವಾಳ ಹರಿದುಬಂದಿದೆ ಎಂಬುದನ್ನು ಜನತೆಗೆ ತಿಳಿಸಲಿ ಎಂದು ಯಡಿಯೂರಪ್ಪ ಸಿ.ಎಂ ಗೆ ಸವಾಲು ಹಾಕಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಸಿ.ಎಂ ಆಸಕ್ತಿ ತೋರುತ್ತಿಲ್ಲ. ಪರಿಣಾಮ ಅಮೆಜಾನ್, ಗೂಗಲ್ ನಂತಹ ಖ್ಯಾತ ಕಂಪನಿಗಳು ರಾಜ್ಯವನ್ನು ಬಿಟ್ಟು ನೆರೆ ರಾಜ್ಯಗಳತ್ತ ಮುಖಮಾಡಿವೆ. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಮುಖ್ಯಮಂತ್ರಿಗಳು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿಲ್ಲ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.