ರಾಜಕೀಯ

ಬಿದರಿಯೇ ಲಾಟರಿ ದಂಧೆ ಮೂಲ ರಕ್ಷಕ: ಎಚ್ ಡಿ. ಕುಮಾರಸ್ವಾಮಿ

Mainashree

ಬೆಂಗಳೂರು: ಶಂಕರ ಬಿದರಿಯವರ ಕಾಲದಿಂದಲೇ ಲಾಟರಿ-ಮಟ್ಕಾ ದಂಧೆ ನಡೆಯುತ್ತಿದೆ. ಅವರೇ ದಂಧೆಯ ಮೂಲ ರಕ್ಷಕರು. ಈಗ ಬಂಧನವಾಗಿರುವ ಲಾಟರಿ ದಂಧೆಯ ಪ್ರಮುಖ ರೂವಾರಿ ಪಾರಿ ರಾಜನ್‍ನನ್ನು ತಮ್ಮ ಕೊಠಡಿಯಲ್ಲಿ ಕೂರಿಸಿಕೊಂಡು ಅವರು ಏನು ಚರ್ಚಿಸುತ್ತಿದ್ದರು, ಐಟಿಸಿ ಗಾರ್ಡೇನಿಯಕ್ಕೆ ಇಬ್ಬರೂ ಒಟ್ಟಿಗೆ ಹೋಗಿ ಏನು ಮಾಡುತ್ತಿದ್ದರು ಎಂಬುದು ಬಹಿರಂಗವಾಗಲಿ. ಪಾರಿರಾಜನ್‍ಗೆ ಐಜಿಪಿ ಅಲೋಕ್ ಕುಮಾರ್ ಅವರನ್ನು ಪರಿಚಯಿಸಿದ್ದೂ ಸಹ ಶಂಕರ್ ಬಿದರಿಯವರೇ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲೋಕ್ ಕುಮಾರ್ ಅವರನ್ನು ಈ ಖೆಡ್ಡಾಕ್ಕೆ ಕೆಡವಿದ್ದು ಶಂಕರ ಬಿದರಿಯವರೇ. ಸಂಜೆ ತಮ್ಮ ಕಚೇರಿಗೆ ಬಂದು ಕೂರುತ್ತಿದ್ದ ಪಾರಿ ರಾಜನ್ ಒಳ್ಳೆಯ ಮನುಷ್ಯ, ಸಮಾಜ ಸೇವಕ ಎಂದು ಅಲೋಕ್ ಕುಮಾರ್ ಗೆ ಪರಿಚಯಿಸಿದ್ದಾರೆ.
ಇಂತಹ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯದ ಕಾನೂನು ಸುವ್ಯವಸ್ಥೆ ರಕ್ಷಣೆ ಸಾಧ್ಯವೇ ಎಂಬುದು ನನ್ನ ಪ್ರಶ್ನೆ. ಹಾಗೆಯೇ ಡಿ.ಕೆ.ರವಿ ಪ್ರಕರಣದಲ್ಲಿ ಸರ್ಕಾರದ ತೋರಿದ ಆಸಕ್ತಿ ಈಗೇಕಿಲ್ಲ? ಒಂದೂವರೆ ವರ್ಷದ ಹಿಂದೆಯೇ ನಾನು ಸರ್ಕಾರಕ್ಕೆ ಎಚ್ಚರಿಸಿದರೆ ನನ್ನ ವಿರುದ್ಧವೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಟೀಕಿಸಿದರು. ಲಾಟರಿ ದಂಧೆಯೇ ನಡೆಯುತ್ತಿಲ್ಲ ಎಂದು ವಾದ ಮಾಡಿದರು. ಈಗ ಸಿಐಡಿ ವರದಿಯಲ್ಲಿ 32-33 ಅಧಿಕಾರಿಗಳು ಶಾಮೀಲಾಗಿರುವ ಮಾಹಿತಿ ಇದೆ. ಇದಕ್ಕೆ ಮುಖ್ಯಮಂತ್ರಿಯವರು ಏನು ಹೇಳುತ್ತಾರೆ? ರಾಜ್ಯಪಾಲರು ಈ ವರದಿ ಇಟ್ಟುಕೊಂಡೇ ಸರ್ಕಾರವನ್ನು ವಜಾ ಮಾಡಬೇಕೆಂಬುದು ನಮ್ಮ ಆಗ್ರಹ ಎಂದರು.

ಚಂದ್ರಕಾಂತ್ ರಕ್ಷಣೆ ಏಕೆ?: ಅಕ್ರಮ ಲಾಟರಿ ಪ್ರಕರಣದಲ್ಲಿ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಎಸ್ಪಿ ಧರಣೇಶ್ ಅವರನ್ನು ಸರ್ಕಾರ ಅಮಾನತು ಮಾಡಿತು. ಆದರೆ, ಈ ಪ್ರಕರಣದಲ್ಲಿ ಅಷ್ಟೇ ಮಹತ್ವದ ಪಾತ್ರ ವಹಿಸಿರುವ ಚಂದ್ರಕಾಂತ್ ಎಂಬ ಮತ್ತೊಬ್ಬ ಎಸ್ಪಿಯ ರಕ್ಷಣೆ ಏಕೆ ಮಾಡಲಾಗುತ್ತಿದೆ ಎಂಬುದನ್ನು ಮುಖ್ಯಮಂತ್ರಿಯವರು ಬಹಿರಂಗಪಡಿಸಲಿ.
ಬೆಂಗಳೂರು ದಕ್ಷಿಣದಲ್ಲಿ ಲಾಟರಿ ದಂಧೆಯಿಂದ ಮಾಸಿಕ ರು.15 ಲಕ್ಷ ಕಲೆಕ್ಷನ್ ಬದಲಾಗಿ ರು.25 ಲಕ್ಷ ತಂದುಕೊಡುತ್ತೇನೆಂದು ಚಂದ್ರಕಾಂತ್ ಹಿರಿಯ ಅಧಿಕಾರಿ ಬಳಿ ಪಟ್ಟುಹಿಡಿದಿದ್ದೇ ಪ್ರಕರಣ ಹೊರಬರಲು ಕಾರಣ. 1999ರಲ್ಲಿ ಕೆಪಿಎಸ್ಸಿ ಮೂಲಕ ಚಂದ್ರಕಾಂತ್‍ಗೆ ಕೆಲಸ ಕೊಡಿಸಿದ್ದೇ ಸಿದ್ದರಾಮಯ್ಯ. ಆತ ಸಿದ್ದರಾಮಯ್ಯನವರ ನೆಂಟ. ನೆಂಟ ಹೌದೋ ಅಲ್ಲವೋ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಲಿ. ನಮ್ಮದು ದಲಿತ ಪರ ಸರ್ಕಾರ ಎಂದು ಹೇಳುವ ಸರ್ಕಾರ, ದಲಿತ ಧರಣೇಶ್ ಅವರ ಮೇಲೆ ಕ್ರಮಕೈಗೊಂಡಿತು. ಪಾರಿ ರಾಜನ್‍ನಂತಹ `ದಲಿತ'ರನ್ನು ರಕ್ಷಿಸಿಕೊಂಡು ಬರುತ್ತಿದೆ ಎಂದರು.

ವಿದೇಶಕ್ಕೆ ಕಳಿಸ್ತೀರಾ?: ಅಲೋಕ್ ಕುಮಾರ್ ಕಟ್ಟುನಿಟ್ಟಿನ ಅಧಿಕಾರಿ ಎಂದು ಕೊಂಡಿದ್ದೆವು. ಅಂತಹವರು ರಾಜನ್ ನನ್ನ ಹಿತೈಷಿ ಎಂದು ಹೇಳಿಕೆ ನೀಡುತ್ತಾರೆ. ಅದೂ ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡುತ್ತಾರೆಂದರೆ ತನಿಖೆ ಯಾವ ದಿಕ್ಕಿನತ್ತ ಸಾಗಬಹುದೆಂದು ಸ್ಪಷ್ಟವಾಗಿ ಊಹಿಸಬಹುದು. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೊರಡಲು ತಯಾರಾಗಿರುವ ಇಂತಹ ಅಧಿಕಾರಿಯನ್ನು ವಿದೇಶಕ್ಕೆ ಕಳುಹಿಸುತ್ತೀರೋ ಅಥವಾ ರಾಜನ್ ಇರುವ ಕಸ್ಟಡಿಗೆ ಕಳುಹಿಸುತ್ತೀರೋ ಎಂಬುದನ್ನು ಜನರಿಗೆ ತಿಳಿಸಿ. ಇನ್ನು ಎರ್ಕಾಡ್‍ನ ಎರಡು ಗೆಸ್ಟ್ ಹೌಸ್‍ನಲ್ಲಿ ಹಿರಿಯ ಪೊಲೀಸರಿಗೆ ಆತಿಥ್ಯ ಏಕೆ ನಡೆಯುತ್ತಿತ್ತೆಂಬುದು ಸ್ಪಷ್ಟವಾಗಿದೆ. ಮಟ್ಕಾ ಲಾಟರಿ ಕಮಿಷನ್‍ನಲ್ಲಿ ಷೇರು ಹಂಚಿಕೆಯಲ್ಲಿ ಕಿತ್ತಾಟ ನಡೆದಿದೆ, ಆಗ ಪ್ರಕರಣ ಹೊರಬಂದಿದೆ ಎಂದರು.

ಅಮಾನತು ಏಕಿಲ್ಲ?: ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದವರ ಪೈಕಿ ಮೂರು ಅಧಿಕಾರಿಗಳನ್ನು ತರಾತುರಿಯಲ್ಲಿ ಸರ್ಕಾರ ಏಕೆ ವರ್ಗಾಯಿಸಿತು? ಸತ್ಯ ಹೊರಬರುತ್ತದೆ ಎಂದೋ ಅಥವಾ ಸತ್ಯ ಹೊರಬರುವುದಿಲ್ಲ ಎಂಬ ಕಾರಣಕ್ಕೆ ವರ್ಗಾಯಿಸಿದಿರೋ ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಇಷ್ಟರ ಮಧ್ಯೆಯೇ ತನಿಖಾಧಿಕಾರಿಗಳು ಸತ್ಯಸಂಗತಿಯನ್ನು ಬಯಲಿಗೆಳೆದಿದ್ದಾರೆ. ಅದೇ ರೀತಿ ಇಷ್ಟು ದಿನಗಳಿಂದ ನಡೆಯುತ್ತಿರುವ ದಂಧೆಯಲ್ಲಿ ಪಾಲ್ಗೊಂಡಿರುವ ಮತ್ತು ಈಗ ವರದಿಯಲ್ಲಿರುವ 32-33 ಅಧಿಕಾರಿಗಳ ಪೈಕಿ ಎಷ್ಟು ಜನರನ್ನು ಅಮಾನತು ಮಾಡಿದ್ದೀರಿ ಎಂಬುದನ್ನು ಜನರಿಗೆ ಹೇಳಬೇಕಾಗುತ್ತದೆ ಎಂದರು.

SCROLL FOR NEXT