ಹುಬ್ಬಳ್ಳಿ: ಮಹಾತ್ಮಾ ಗಾಂಧಿ ಗೋಹತ್ಯೆ ವಿರೋಧಿಸಿದ್ದರು ಹಾಗೂ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜಿಸುವಂತೆ ಸಲಹೆ ನೀಡಿದ್ದರು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಗೋಮಾಂಸ ಸೇವಿಸುವುದಾಗಿ ಹೇಳಿ ರಾಜ್ಯದ ಜನರ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದಾರಲ್ಲದೇ ಮೂಲ ಕಾಂಗ್ರೆಸ್ ಆಶಯ ಮರೆತ ನಕಲಿ ಕಾಂಗ್ರೆಸ್ ನಕಲಿ ನೇತಾರರಾಗಿದ್ದಾರೆ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ,
‘ದೇಶದಲ್ಲಿ ಹಸುವನ್ನು ತಾಯಿ ಎಂದು ಪೂಜಿಸಲಾಗುತ್ತಿದೆ ಎಂಬುದು ಗೊತ್ತಿದ್ದರೂ ‘ನಾನೂ ಗೋಮಾಂಸ ತಿನ್ನುತ್ತೇನೆ’ ಎಂದು ಹೇಳಿರುವ ಸಿದ್ದರಾಮಯ್ಯ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತಂದಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಅವರು ಕೇವಲ ಮತಬ್ಯಾಂಕ್‌ಗಾಗಿ ಆ ರೀತಿ ಹೇಳಬಾರದಿತ್ತು’ ಎಂದರು.
ಅಧಿಕಾರದ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನೇ ದಿನೇ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಸೌಜನ್ಯವಿದ್ದರೆ ಅವರು ಗೋಮಾಂಸ ಸೇವನೆ ಕುರಿತ ಹೇಳಿಕೆಯನ್ನು ಹಿಂದಕ್ಕೆ ಪಡೆಯಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಆಗ್ರಹಿಸಿದರು. ಅಲ್ಪಸಂಖ್ಯಾತರಿಗೆ ಭರವಸೆಯ ವಾತಾವರಣ ನಿರ್ಮಿಸಬೇಕಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಯಾವ ಸಂದರ್ಭದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ದಾದ್ರಿ ಘಟನೆಯಾಗಲಿ, ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣವಾಗಲಿ ಆಯಾ ರಾಜ್ಯಗಳಿಗೆ ಸಂಬಂಧಿಸಿದ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರ ಹೊರತು ಕೇಂದ್ರಕ್ಕೆ ಸಂಬಂಧಿಸಿಲ್ಲ’ ಎಂದು ಜೋಶಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಯಾವುದೋ 2 ಘಟನೆ ಉಲ್ಲೇಖಿಸಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎನ್ನವುದು ಸರಿಯಲ್ಲ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿರುವುದನ್ನು ಅರಗಿಸಿಕೊಳ್ಳಲಾಗದವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇಡೀ ಜಗತ್ತಿನಲ್ಲಿ ಅಲ್ಪಸಂಖ್ಯಾತರು ಹೆಚ್ಚು ಸುರಕ್ಷಿತವಾಗಿರುವುದು ಭಾರತದಲ್ಲಿಯೇ ಎಂಬುದನ್ನು ಚಿಂತಕರು ತಿಳಿಯಬೇಕಿದೆ’ ಎಂದರು.