ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ಪಾಕಿಸ್ತಾನಿ ಸಂಗೀತಕಾರ ಗುಲಾಂ ಅಲಿ ಹಾಗೂ ಶಾರುಖ್ ಖಾನ್ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.
ಒಂದೆಡೆ ಗುಲಾಂ ಅಲಿ ಭಾರತಕ್ಕೆ ಬಂದು ಕಾರ್ಯಕ್ರಮ ನೀಡುವುದಾದರೆ ಅವರಿಗೆ ಸಂಪೂರ್ಣ ಭದ್ರತೆ ನೀಡುವುದಾಗಿ ಹೇಳುವ ಮಹಾರಾಷ್ಟ್ರ ಸರ್ಕಾರ, ಮತ್ತೊಂದೆಡೆ ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿ ಆತನನ್ನು ಪಾಕಿಸ್ತಾನಕ್ಕೆ ಹೋಗುವಂತೆ ಹೇಳುತ್ತಿದ್ದು ದ್ವಿಮುಖ ರಾಜಕೀಯ ನೀತಿ ಅನುಸರಿಸುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿದೆ.
ಇದೇ ವೇಳೆ ಶಾರುಖ್ ಖಾನ್ ಅವರ ಅತಿರೇಕದ ವಕಾಲತ್ತಿನ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಶಿವಸೇನೆ, ಶಾರುಖ್ ಖಾನ್ ಪದೇ ಪದೇ ವಿವಾದಗಳಿಗೆ ಕಾರಣವಾಗುತ್ತಾರೆ. ಆದರೆ ಅವರ ವಿರುದ್ಧ ವಾಗ್ದಾಳಿ ನಡೆಯುತ್ತಿರುವುದು ಸರಿಯಲ್ಲ ಎಂದು ಹೇಳಿದೆ.
ಶಾರುಖ್ ಖಾನ್ ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನಕ್ಕೆ ತೆರಳುವಂತೆ ಸೂಚಿಸುವುದು ತಪ್ಪು ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ. ಶಾರೂಖ್ ಖಾನ್ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದ ಉಗ್ರ ಹಫೀಜ್ ಸಯೀದ್ ಬಗ್ಗೆಯೂ ಮಾತನಾಡಿರುವ ಶಿವಸೇನೆ, ಹಫೀಜ್ ಸಯೀದ್ ಭಾರತದಲ್ಲಿರುವ ಮುಸ್ಲಿಮರನ್ನು ಪ್ರತ್ಯೇಕಿಸುವ ಯತ್ನಿಸುತ್ತಿದ್ದಾನೆ. ಅಸಹಿಷ್ಣುತೆ ಚರ್ಚೆ ವಿಷಯದಲ್ಲಿ ಶಾರೂಖ್ ಖಾನ್ ಅವರನ್ನು ನಿಂದಿಸಬಾರದು ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಶಾರುಖ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಕೈಲಾಶ್ ವಿಜಯ ವಾರ್ಗಿಯಾ ಶಾರೂಖ್ ಖಾನ್ ಭಾರತದಲ್ಲಿದ್ದಾರೆ ಆದರೂ ಅವರ ಮನಸ್ಸು ಪಾಕಿಸ್ತಾನದಲ್ಲಿದೆ ಎಂದಿದ್ದರು.