ರಾಜಕೀಯ

ಉಪಲೋಕಾಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ನಲ್ಲೇ ಭಿನ್ನಾಭಿಪ್ರಾಯ: ಶಾಸಕರ ಸಭೆ ರದ್ದು

Srinivas Rao BV

ಬೆಂಗಳೂರು: ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ಅವರ ಪದಚ್ಯುತಿಗೆ ನೀಲನಕ್ಷೆ ತಯಾರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರಲ್ಲೂ ಭಿನ್ನಾಭಿಪ್ರಾಯ ಮೂಡಿದೆ.
ಉಪಲೋಕಾಯುಕ್ತ ಬಿ.ಅಡಿ ಅವರ ಪದಚ್ಯುತಿ ನಿರ್ಣಯಕ್ಕೆ ಸಂಬಂಧಿಸಿದಂತೆ ನ.23 ರಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕರ ಸಭೆ ನಡೆಯಬೇಕಿತ್ತು. ಆದರೆ ಉಪಲೋಕಾಯುಕ್ತರ ಪದಚ್ಯುತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗುವ ಸಾಧ್ಯತೆಗಳಿದ್ದ ಕಾರಣ ಸಿಎಂ ಸಿದ್ದರಾಮಯ್ಯ ಶಾಸಕರ ಸಭೆಯನ್ನೇ ರದ್ದುಗೊಳಿಸಿದ್ದಾರೆ.
ಕಾಂಗ್ರೆಸ್ ಶಾಸಕರ ಸಭೆಯನ್ನು ರದ್ದುಗೊಳಿಸಲಾಗಿದೆಯಾದರೂ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ.
ಉಪಲೋಕಾಯುಕ್ತರ ಪದಚ್ಯುತಿ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ಇಲ್ಲ: ಇದೇ ವೇಳೆ ಉಪಲೋಕಾಯುಕ್ತರ ಪದಚ್ಯುತಿಗೆ ಬೆಂಬಲ ನೀಡುವ ಬಗ್ಗೆ ತೀರ್ಮಾನಿಸಲು ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದ್ದು, ಉಪಲೋಕಾಯುಕ್ತರನ್ನು ಪದಚ್ಯುತಿಗೊಳಿಸಲು ಕಾಂಗ್ರೆಸ್ ಕೈಗೊಂಡಿರುವ ನಿರ್ಣಯಕ್ಕೆ ಬೆಂಬಲ ನೀಡದೇ ಇರಲು ಜೆಡಿಎಸ್ ಶಾಸಕರು ನಿರ್ಧರಿಸಿದ್ದಾರೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಲೋಕಾಯುಕ್ತ ನ್ಯಾ. ವೈ ಭಾಸ್ಕರ್ ರಾವ್ ಪದಚ್ಯುತಿಗೆ ಮಾತ್ರ ಬೆಂಬಲ ನೀಡಲು ಜೆಡಿಎಸ್ ಶಾಸಕಾಂಗ ಸಭೆ ತೀರ್ಮಾನಿಸಿದೆ.

SCROLL FOR NEXT