ವಿಧಾನ ಸಭೆ: ವೈದ್ಯರ ನೇಮಕಾತಿಗೆ ಇದ್ದ ಅಡೆತಡೆಗಳನ್ನು ಪರಿಹರಿಸಿರುವ ಕಾರಣ ಸದ್ಯದಲ್ಲೇ ನೇಮಕಾತಿ ನಡೆಯಲಿದೆ ಎಂದು ಆರೋಗ್ಯ ಸಚಿವ ಖಾದರ್ ಹೇಳಿದರು. ಸದಸ್ಯ ಮಹಾಂತೇಶ ಕೌಜಲಗಿ ಪ್ರಶ್ನೆಗೆ ಉತ್ತರಿಸಿದ ಅವರು, 483 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು- ಜಿಲ್ಲಾ ಆಸ್ಪತ್ರೆಗಳಲ್ಲಿ 1330 ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ.
ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ 299 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹಾಗೂ 208 ತಜ್ಞ ವೈದ್ಯರ ಹುದ್ದೆ ಖಾಲಿ ಇವೆ. ಇವುಗಳನ್ನು ತುಂಬುವ ಪ್ರಕ್ರಿಯೆ ನಡೆದಿದೆ ಎಂದರು. ಕೆಪಿಎಸ್‍ಸಿ 9 ತಜ್ಞತೆಗಳ 749 ಹುದ್ದೆಗಳ ಪೈಕಿ 574 ಹುದ್ದೆಗಳಿಗೆ ಆಯ್ಕೆ ಪಟ್ಟಿ ಕಳುಹಿಸಿದೆ.
ಮಾಸಾಂತ್ಯದೊಳಗೆ ಅಂತಿಮ ಆಯ್ಕೆ ಪಟ್ಟಿ ಕಳುಹಿಸುವುದಾಗಿ ಕೆಪಿಎಸ್ಸಿ ತಿಳಿಸಿದೆ. ಬಳಿಕ ನಿಯಮಾನುಸಾರ ಮುಂದಿನ ತಿಂಗಳ ಅಂತ್ಯದೊಳಗೆ ವೈದ್ಯರ ಹಾಗೂ ತಜ್ಞರ ನೇಮಕಾತಿ ಪೂರ್ಣಗೊಳಿಸಲಾಗುವುದೆಂದು ಖಾದರ್ ವಿವರಿಸಿದರು.