ಬೆಂಗಳೂರು: ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಗುಣಮಟ್ಟ ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಎಚ್ಚರಿಕೆ ನೀಡಿದ್ದಾರೆ. ಶನಿವಾರ ತಡರಾತ್ರಿ ಗಾಂಧಿನಗರ, ಯಲಹಂಕ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಗುಂಡಿ ಮುಚ್ಚುವ ಕಾಮಗಾರಿಯನ್ನು ಮೊದಲ ಬಾರಿಗೆ ಪರಿಶೀಲಿಸಿದ ಸಚಿವರು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಗುಂಡಿಗಳಿಂದಾಗಿ ನಗರದಲ್ಲಿ ಹೆಚ್ಚಿನ ಅಪಘಾತ ಸಂಭವಿಸುತ್ತಿದ್ದು, ಗುಣಮಟ್ಟದ ಕಾಮಗಾರಿ ನಡೆಸಬೇಕು. ನೀಡಿದ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಗುತ್ತಿಗೆದಾರರೊಬ್ಬರು ಟೆಂಡರ್ ಪಡೆದು ಮೂರು ತಿಂಗಳಾದರೂ ಕಾಮಗಾರಿ ನಡೆಸದಿರುವುದು ಪರಿಶೀಲನೆ ವೇಳೆ ಕಂಡುಬಂತು. `ಬಿಬಿಎಂಪಿಯಿಂದ ಗುತ್ತಿಗೆ ಪಡೆದು ಮೂರು ತಿಂಗಳಾದರೂ ಏಕೆ ಕೆಲಸ ಮಾಡಿಲ್ಲ? ರಸ್ತೆ ದುರಸ್ತಿ ಮಾಡದಿದ್ದರೆ ಗುತ್ತಿಗೆ ಪಡೆದಿರುವುದು ಏಕೆ?' ಎಂದು ಸಚಿವ ಜಾರ್ಜ್ ಅವರು ಗುತ್ತಿಗೆದಾರರ ಮೇಲೆ ಹರಿಹಾಯ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ರು.418 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಈಗ ನಡೆಸುತ್ತಿರುವ ಗುಂಡಿ ಮುಚ್ಚುವ ಕಾಮಗಾರಿ ತಾತ್ಕಾಲಿಕವಾಗಿದೆ. ರಾಜ್ಯ ಸರ್ಕಾರದ ನಗರೋತ್ಥಾನಯೋಜನಯಡಿ ಕೈಗೊಳ್ಳುವ ಕಾಮಗಾರಿಯಿಂದ ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
ಭಾನುವಾರ ಬೆಳಗ್ಗೆ ಮೇಯರ್ ಮಂಜುನಾಥ ರೆಡ್ಡಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದರು. ಬೆಳಗ್ಗೆಯೇ ಸಂಚಾರಆರಂಭಿಸಿದ ಅವರು ವಿವಿಧ ರಸ್ತೆಗಳಲ್ಲಿ ನಡೆಯುತ್ತಿರುವ ಗುಂಡಿ ಮುಚ್ಚುವ ಕಾಮಗಾರಿಯನ್ನು ವೀಕ್ಷಿಸಿದರು. ಮಳೆ ಬರುವ ನಿರೀಕ್ಷೆಯಿರುವುದರಿಂದ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಹಳೇ ಮದ್ರಾಸ್ ರಸ್ತೆ, ಹೆಣ್ಣೂರು-ಬಾಗಲೂರು ಮುಖ್ಯರಸ್ತೆ, ಕೆ.ನಾರಾಯಣಪುರ ಮುಖ್ಯರಸ್ತೆ, ಬಸವನಪುರ ಮುಖ್ಯರಸ್ತೆ, ಹೊರಮಾವು ಮುಖ್ಯರಸ್ತೆ, ದೇವಸಂದ್ರ ಮುಖ್ಯರಸ್ತೆ, ಕರಿಯಮ್ಮ
ಅಗ್ರಹಾರ ರಸ್ತೆ, ಚನ್ನಸಂದ್ರ ಸೇರಿದಂತೆ ವಲಯದ ಪ್ರಮುಖ ರಸ್ತೆಗಳಲ್ಲಿ ಹೊಸ ರಸ್ತೆ ಕಾಮಗಾರಿಗಳು ಆರಂಭವಾಗಲಿವೆ. ಇದಕ್ಕೆ ಒಟ್ಟು ರು.150 ಕೋಟಿ ಯೋಜನೆ ರೂಪಿಸಲಾಗಿದೆ.