ಹಾವೇರಿ: ಕಳಸಾಬಂಡೂರಿ, ಮಹದಾಯಿ, ಬರ ಪರಿಹಾರದ ಸಂಬಂಧ ಪ್ರಧಾನಿ ಮೋದಿಯವರ ಬಳಿ ಸರ್ವಪಕ್ಷಗಳ ನಿಯೋಗದಲ್ಲಿ ತೆರಳಿದಾಗ ಬಿಜೆಪಿಯ ಒಬ್ಬರೂ ತುಟಿ ಬಿಚ್ಚಲಿಲ್ಲ. ಈಗ ರೈತರ ಹೆಸರಿನಲ್ಲಿ ಯಾತ್ರೆ ಕೈಗೊಂಡು ನಾಟಕ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪನವರಿಗೆ ಹತಾಶೆಯಾಗಿದೆ. ಪ್ರಧಾನಿ ಬಳಿಗೆ ನಿಯೋಗದಲ್ಲಿ ತೆರಳಿದಾಗ ಕಳಸಾಬಂಡೂರಿ, ಮಹದಾಯಿ ನದಿ ತಿರುವು ಯೋಜನೆ ಕುರಿತು ಮನವರಿಕೆ ಮಾಡಿಕೊಡಬಹುದಿತ್ತು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಬಹುದಿತ್ತು. ಆಗ ಸುಮ್ಮನಿದ್ದು ಈಗ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸುತ್ತಿರುವುದು ಕೇವಲ ನಾಟಕ ಎಂದು ಆರೋಪಿಸಿದರು.
ಗೋವಾದಲ್ಲಿ ಒಕ್ಕಲೆಬ್ಬಿಸಿರುವ 157 ಕನ್ನಡಿಗರ ಕುಟುಂಬಕ್ಕೆ ವಸತಿ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಒಂದು ವೇಳೆ ಸಾಧ್ಯವಾಗದಿದ್ದರೆ ನಾವೇ ಮನೆ ನಿರ್ಮಿಸಿಕೊಡುವುದಾಗಿಯೂ ಪತ್ರದಲ್ಲಿ ತಿಳಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. ಭೂಕಬಳಿಕೆ ಆರೋಪಕ್ಕೆ ಸಚಿವ ಆರ್.ವಿ. ದೇಶಪಾಂಡೆ ಅವರೇ ಉತ್ತರ ನೀಡಿದ್ದಾರೆ. ಅದು ಡಿಫರೆಸ್ಟ್ ಮಾಡಿದ ಜಮೀನಾಗಿದ್ದು, ದೇಶಪಾಂಡೆಯವರು ಖರೀದಿಸುವ ಮುನ್ನ ಐದಾರು ಕೈ ಬದಲಾವಣೆಯಾಗಿದೆ.
ಕುಮಾರಸ್ವಾಮಿಯವರಿಗೆ ಇಂಥ ಆರೋಪ ಮಾಡುವುದೇ ಕೆಲಸವಾಗಿದೆ ಎಂದು ಸಿದ್ದರಾಮಯ್ಯ ಕುಟುಕಿದರು. ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿಗೆ ಹೋದಾಗ ರಾಹುಲ್ ಗಾಂಧಿ ಹಾಗೂ ದಿಗ್ವಿಜಯï ಸಿಂಗ್ ಅವರ ಭೇಟಿ ಸಾಧ್ಯವಾ ಗಲಿಲ್ಲ. ಅ. 9 ಮತ್ತು 10ರಂದು ರಾಹುಲ್ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅವರು ಬಂದು ಹೋದ ಬಳಿಕ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ದೆಹಲಿಗೆ ಹೋಗುವುದಾಗಿ ಸಿದ್ದರಾಮಯ್ಯ ತಿಳಿಸಿದರು.