ಬೆಂಗಳೂರು: ಬರ ಪರಿಹಾರ ಕಾಮಗಾರಿಗೆ ಕೇಂದ್ರ ಸರ್ಕಾರ ನೀಡಿರುವ ಅನುದಾನ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹಣದ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 6೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ, ಸುಸ್ತಿ ಬಡ್ಡಿ ಮನ್ನಾ ಮಾಡುವ ಮೂಲಕ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದಕ್ಕೆ ಮುಂದುವರಿದ ರೈತರ ಆತ್ಮಹತ್ಯೆಗಳೇ ಸಾಕ್ಷಿ ಎಂದರು.
ಕಳ್ಳರನ್ನು ಹಿಡಿಯಲು ಹೋಗಿ ಅವರ ಕೈಯಿಂದಲೇ ಮೃತಪಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ಅವರಿಗೆ ಈಗ ನೀಡಲಾಗುತ್ತಿರುವ ಪರಿಹಾರದ ಜತೆಗೆ ಅವರು ಸೇವಾವಧಿಯ ಉದ್ದಕ್ಕೂ ಪಡೆಯುತ್ತಿದ್ದ ವೇತನವನ್ನು ಪತ್ನಿಗೆ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಹಿಂದೆ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಪ್ರಕರಣದಲ್ಲೂ ಸರ್ಕಾರ ಇದೇ ಭರವಸೆ ನೀಡಿದ್ದರೂ ಕುಟುಂಬಕ್ಕೆ ಹಣ ಬರುತ್ತಿಲ್ಲ. ಜಗದೀಶ್ ಪ್ರಕರಣದಲ್ಲೂ ಇದೇ ರೀತಿ ಆಗಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.