ಬೆಂಗಳೂರು: ದೊಡ್ಡಬಳ್ಳಾಪುರ ಟೌನ್ ಎಸ್ಸೈ ಜಗದೀಶ ಹಂತಕರಾದ ಹರೀಶ್ ಬಾಬು ಹಾಗೂ ಮಧು ಕೃತ್ಯಕ್ಕೆ ಬಳಸಿದ್ದ ಚಾಕು, ಧರಿಸಿದ್ದ ಬಟ್ಟೆ ಹಾಗೂ ಜಗದೀಶ್ ಅವರಿಂದ ಕಿತ್ತುಕೊಂಡು ಹೋಗಿದ್ದ ರಿವಾಲ್ವಾರ್‍ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಾಗಪುರ ರೈಲು ನಿಲ್ದಾಣದಲ್ಲಿ ಅಲ್ಲಿಯ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದಿದ್ದ ಮಧು ಹಾಗೂ ಹರೀಶ್ ಬಾಬುನನ್ನು ಬುಧವಾರ ರಾತ್ರಿ ನಗರಕ್ಕೆ ಕರೆತಂದ ರಾಜ್ಯ ಪೊಲೀಸರು, ಗುರುವಾರ ಬೆಳಗ್ಗೆ ನೆಲಮಂಗಲ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ವಿ. ಪ್ರಕಾಶ ಅವರ ಮನೆಗೆ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗೆ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಮಾಡಿದ ಮನವಿಗೆ ಒಪ್ಪಿದ ನ್ಯಾಯಧೀಶರು 14 ದಿನ ಪೊಲೀಸರ ವಶಕ್ಕೆ ಒಪ್ಪಿಸಿ
ಆದೇಶಿಸಿದರು. ಬಂಧಿತರ ಹೇಳಿಕೆ ಆಧರಿಸಿ ಗುರುವಾರವೇ ಆಂಧ್ರಪ್ರದೇಶದ ಕರ್ನೂಲಿಗೆ ತೆರಳಿ ಚಿನ್ನಾಭರಣ ವ್ಯಾಪಾರಿ ಹನುಮಂತರಾಮು ಎಂಬಾತನ ಮನೆಯಲ್ಲಿದ್ದ ರಿವಾಲ್ವಾರ್,
ಚಾಕು ಹಾಗೂ ಆರೋಪಿಗಳ ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ. ವಿಚಾರಣೆಗಾಗಿ ಆತನನ್ನೂ ವಶಕ್ಕೆ ಪಡೆದಿದ್ದಾರೆ.
ಇರಿದಿದ್ದು ಹರೀಶ್ ಬಾಬು: ಬಂಧಿಸಲು ಮುಂದಾದ ಎಸ್ಸೈ ಜಗದೀಶ್ ಅವರಿಗೆ ಚಾಕುವಿನಿಂದ ಇರಿದಿದ್ದು ಹರೀಶ ಬಾಬುಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.