ಬೆಂಗಳೂರು: ಬಿಬಿಎಂಪಿಯಲ್ಲಿ ಆಡಳಿತ ನಡೆಸಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನ ಚುನಾವಣಾ ಫಲಿತಾಂಶವನ್ನೇ ಅಣಕಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟೀಕಿಸಿದ್ದಾರೆ.
ಚುನಾವಣೆಯಲ್ಲಿ ಸೋತಿದ್ದರೂ ಬಿಬಿಎಂಪಿಯಲ್ಲಿ ಆಡಳಿತ ನಡೆಸಲು ಕಾಂಗ್ರೆಸ್ ನಡೆಸುತ್ತಿರುವ ಯತ್ನ ಭ್ರಷ್ಟ ರಾಜಕಾರಣವಾಗಿದೆ. ಬೆಂಗಳೂರನ್ನು ತನ್ನ ವಶದಲ್ಲಿಟ್ಟುಕೊಳ್ಳಲು ಚುನಾವಣೆಗಳನ್ನು ಮುಂದೂಡುವುದು, ತಡೆಯುವುದು ಸೇರಿದಂತೆ ಅನೇಕ ರಾಜಕೀಯ ಆಟಗಳನ್ನು ಹಲವು ತಿಂಗಳಿಂದ ಆಡುತ್ತಲೇ ಬಂದಿದೆ ಎಂದು ಕಿಡಿಕಾರಿದ್ದಾರೆ.
ಈಗ ನಗರದ ನಾಗರಿಕರ ತೀರ್ಪು ತನಗೆ ವ್ಯತಿರಿಕ್ತವಾಗಿ ಬಂದಿರುವುದನ್ನು ಎದುರಿಸಲಾಗದೆ, ಮತ್ತೆ ತನ್ನ ರಾಜಕೀಯ ಆಟ ಮುಂದುವರಿಸಿದೆ. ಇದು ರಾಜಕಾರಣದ ಕೆಟ್ಟ ದೃಷ್ಟಾಂತ. ಬೆಂಗಳೂರಿಗೆ ಅಗತ್ಯವಿರುವುದು ಉತ್ತಮ ನಾಗರಿಕ ಕೇಂದ್ರಿತ ಆಡಳಿತ ಮತ್ತು ಸುಸ್ಪಷ್ಟ ಯೋಜನೆಗಳೇ ಹೊರತು ಮತ್ತಷ್ಟು ಲೂಟಿ ಹಾಗೂ ಶೋಷಣೆಯಲ್ಲ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.