ಬೆಂಗಳೂರು: ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಎರಡನೇ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ವಕೀಲ ಅರುಣ್ ಶ್ಯಾಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಹಾಜರಾಗಿದ್ದ ರಾಜ್ಯ ಸರ್ಕಾರದ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್‍ಪಿಪಿ-2) ಕೆ.ಆರ್.ಕೇಶವಮೂರ್ತಿ ಅವರ ನಡೆ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಏತನ್ಮಧ್ಯೆ ಈ ಪ್ರಕರಣದಲ್ಲಿ ಕೇಶವಮೂರ್ತಿ ಅವರು ಇನ್ನು ಮುಂದೆ ಹಾಜರಾಗದಂತೆ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರು ಬುಧವಾರ ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಹೈಕೋರ್ಟ್ ಮೂಲಗಳು `ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿವೆ. ಈ ಸಂಬಂಧ ಎಸ್‍ಪಿಪಿ ಪಿ.ಎಂ. ನವಾಝ್ ಅವರನ್ನು ಸಂಪರ್ಕಿಸಿದಾಗ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆಎಸ್‍ಪಿಪಿ ಬದಲಾವಣೆ ಕುರಿತು ಈವರೆಗೂ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಹಿಂದೆ ರಾಘವೇಶ್ವರ ಶ್ರೀ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದಾಗ ಹೈಕೋರ್ಟ್‍ನಲ್ಲಿ ವಾದ ಮಂಡಿಸಲು ಸರ್ಕಾರದ ಪರ ವಿಶೇಷ ಅಭಿಯೋಜಕರನ್ನು ನೇಮಿಸಲಾಗಿತ್ತು. ಅದರಂತೆ ಈ ಪ್ರಕರಣದಲ್ಲೂ ವಾದ ಮಂಡಿಸಲು ವಿಶೇಷ ಅಭಿಯೋಜಕರನ್ನು ನೇಮಿಸುವುದಾಗಿ ಮುಂದಿನ ವಿಚಾರಣೆ ವೇಳೆ ಪೀಠದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆ.31ರಂದು ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ಪೀಠದ ಮುಂದೆ ಅರುಣ್ ಶ್ಯಾಮ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಈ ವೇಳೆ ಪ್ರಾಸಿಕ್ಯೂಷನ್ ಪರವಾಗಿ ಹಾಜರಾಗಿದ್ದ ಎಸ್‍ಪಿಪಿ-2 ಕೆ.ಆರ್. ಕೇಶವಮೂರ್ತಿ ಅವರು, ಆರೋಪಿಯು ಹೈಕೋರ್ಟ್‍ನಲ್ಲಿ ವೃತ್ತಿನಿರತ ವಕೀಲರಾ ಗಿದ್ದು, ಜಾಮೀನು ನೀಡಬಹುದು ಎಂದು ಮೌಖಿಕವಾಗಿ ಸಮ್ಮತಿಸಿದ್ದಲ್ಲದೇ ಅತ್ಯಾಚಾ ರಕ್ಕೆ ಒಳಗಾದ ಸಂತ್ರಸ್ತೆಯ ಹೆಸರನ್ನೂ ಬಹಿರಂಗಪಡಿಸಿದ್ದರು ಎಂಬ ಆರೋಪಗಳುಈಗ ವಿವಾದದ ಎಳೆಯನ್ನು ವಿಸ್ತರಿಸಿವೆ.
2ನೇ ಪ್ರಕರಣವೂ ಸಿಐಡಿಗೆ ಅಧಿಕೃತ ಆದೇಶ
ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ವಿರುದ್ಧ ದಾಖಲಾಗಿರುವ ಎರಡನೇ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಅವರು ಗುರುವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ. ರಾಘವೇಶ್ವರ ಶ್ರೀ ವಿರುದ್ಧ ಕಳೆದ ವರ್ಷ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಯುತ್ತಿದೆ. ಹೀಗಾಗಿ, ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವುದಾಗಿ ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಅಧಿಕೃತ ಆದೇಶ ಹೊರಡಿಸಲಾಗಿದೆ.