ಬೆಂಗಳೂರು: ಬಿಬಿಎಂಪಿ ಮೇಯರ್ ಸ್ಥಾನದ ಕಸರತ್ತಿನ ಮುಂದುವರಿದ ಭಾಗವೆಂಬಂತೆ ಶನಿವಾರ ಬಿಜೆಪಿಯ ನೂತನ ಕಾರ್ಪೋರೇಟರ್‍ಗಳು ಪಕ್ಷದ ಮುಖಂಡರೊಂದಿಗೆ ರಾಜಭವನಕ್ಕೆ ಪರೇಡ್ ನಡೆಸಿದರು.
ಬೆಳಗ್ಗೆ ಬಿಬಿಎಂಪಿ ಮುಂಭಾಗದ ಕೆಂಪೇಗೌಡ ಪುತ್ಥಳಿ ಎದುರು ಜಮಾಯಿಸಿದ ಕಾರ್ಪೋರೇಟರ್ಗಳು ಅಲ್ಲಿಂದ ರಾಜಭವನಕ್ಕೆ ಪಾದಯಾತ್ರೆ ನಡೆಸಿದರು. ಈ ವೇಳೆ ಬಾಯಿಗೆ ಕಪ್ಪು ಪಟ್ಟಿ ಧರಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಪೋರೇಟರ್‍ಗಳು ಸೇರಿದಂತೆ ಪಕ್ಷದ 26 ಮುಖಂಡರ ಭೇಟಿಗೆ ಅವಕಾಶ ನೀಡಿದ ರಾಜ್ಯಪಾಲ ವಜುಬಾಯಿ ವಾಲಾ ಅವರು ಬಿಜೆಪಿಯ ಅಹವಾಲನ್ನು ಆಲಿಸಿದರು. ನಂತರ ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂ ಆರ್. ಅಶೋಕ್, ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಬೋಗಸ್ ಮತದಾರರ ಸೇರ್ಪಡೆ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕೆಂಬ ನಮ್ಮ ಮನವಿಗೆ ರಾಜ್ಯಪಾಲರು ಸ್ಪಂದಿಸಿದ್ದಾರೆ.
ಅಧಿಕಾರಿಗಳಿಂದ ಈ ಸಂಬಂಧ ವಿವರಣೆ ಪಡೆಯುವುದಾಗಿ ಭರವಸೆ ನೀಡಿದರು ಎಂದು ವಿವರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗ್ತೇವೆ ಎಂದು ಜನರ ಬಳಿ ಹೋದೆವು. ಜನ ನಮಗೇ ಆಶೀರ್ವಾದ ಮಾಡಿದರು. ಆದರೆ, ಜನಾದೇಶದ ವಿರುದ್ಧವಾಗಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
ಪಕ್ಷೇತರರು ಗೆದ್ದ ಮೇಲೆ ಬಿಜೆಪಿ ಕಚೇರಿಗೆ ಬಂದರು, ನಮ್ಮ ಪಕ್ಷ ಸೇರಿದರು. ಇದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ತಿಳಿಸಿದರು. ಕೊನೆಯ ಗೆಲವು ನಮ್ಮದೇ: ರಾಜ್ಯ ಸರ್ಕಾರ ಜನಾದೇಶಕ್ಕೆ ತಲೆಬಾಗಿ ನಡೆಯುತ್ತಿಲ್ಲ. ಜನಾದೇಶ ಎತ್ತಿ ಹಿಡಿಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಕೆಲವರನ್ನು ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗಿದೆ. ಮತ್ತೊಂದಿಷ್ಟು ಹೆಸರು ಸೇರಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ.
ಬೋಗಸ್ ಮತದಾರರನ್ನು ಸೇರಿಸದಂತೆ ತಡೆಯಬೇಕೆಂಬುದು ನಮ್ಮ ಆಗ್ರಹವಾಗಿತ್ತು ಎಂದರು. ಕಾಂಗ್ರೆಸ್‍ನವರು ಏನೇ ಮಾಡಿದರೂ ಮೇಯರ್ ಮತ್ತು ಉಪ ಮೇಯರ್ ನಮ್ಮ ಪಕ್ಷದವರೇ ಆಗಿರುತ್ತಾರೆ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡರಲ್ಲದೇ ಭಾನುವಾರ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಸ್ವಪಕ್ಷೀಯರೇ ನಾಪತ್ತೆ: ಬಿಜೆಪಿಯ ಇವತ್ತಿನ ಪರೇಡ್‍ನಲ್ಲಿ ಪಕ್ಷದ 25ಕ್ಕೂ ಹೆಚ್ಚು ಕಾರ್ಪೋರೇಟರ್ ಗಳು ನಾಪತ್ತೆಯಾಗಿದ್ದರು. ಅದೇ ರೀತಿ ಬೆಂಗಳೂರಿನ ಕೆಲವೇ ಶಾಸಕರು ಮಾತ್ರ ಪಾಲ್ಗೊಂಡಿದ್ದರು.