ಬೆಂಗಳೂರು: ಬಿಬಿಎಂಪಿ ಅಧಿಕಾರಕ್ಕಾಗಿ ಜೆಡಿಎಸ್ ಜತೆ ಮೈತ್ರಿ ಪ್ರಕ್ರಿಯೆ ಪೂರ್ಣಗೊಂಡ ಮರುದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಮೂಲತಃ ದೇವೇಗೌಡರ ಗರಡಿಯಲ್ಲೇ ಪಳಗಿ ಬಂದಿರುವ ಸಿದ್ದರಾಮಯ್ಯ ಅವರು ಕಳೆದೊಂದು ದಶಕದಿಂದ ಸಂಬಂಧ ಕಡಿದುಕೊಂಡಿದ್ದಾರೆ. ಜೆಡಿಎಸ್‍ನಿಂದ ಉಚ್ಚಾಟನೆಗೊಂಡು ಕಾಂಗ್ರೆಸ್ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ದೇವೇಗೌಡರಿಗೆ ಕರೆ ಮಾಡಿದ್ದು ರಾಜ್ಯ ರಾಜಕಾರಣದಲ್ಲಿನ ಇತ್ತೀಚಿನ ಮಹತ್ವದ ಬೆಳವಣಿಗೆ ಇದಾಗಿದೆ.
ಶನಿವಾರ ಬೆಳಗ್ಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಉಪಮೇಯರ್ ಹೇಮಲತಾ ಗೋಪಾಲಯ್ಯ ಜತೆ ಆಗಮಿಸಿದ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರ ಜತೆ ಮಾತುಕತೆ ನಡೆಸಿದ ಬಳಿಕ ಸಿದ್ದರಾಮಯ್ಯ, ದೇವೇಗೌಡರಿಗೆ ಕರೆ ಮಾಡಿ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಯರ್ ಆಯ್ಕೆಯಾಗಿರುವುದಕ್ಕೆ ಸಹಕರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಕುಮಾರಸ್ವಾಮಿ ಜತೆ ಮಾತನಾಡಿ ಸಿದ್ರಾಮಣ್ಣ: ಕೇವಲ ಕೃತಜ್ಞತೆ ವಿನಿಮಯ ಮಾಡಿಕೊಳ್ಳುವುದಕ್ಕೆ ಮಾತ್ರ ಈ ಕರೆ ಸೀಮಿತವಾಗಿದ್ದರೂ, ದೇವೇಗೌಡರು ಕೆಲ ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಐದು ವರ್ಷದಲ್ಲಿ ಬೆಂಗಳೂರಿನ ಆಡಳಿತ ಹದಗೆಟ್ಟಿದೆ. ಅವ್ಯವಸ್ಥೆಯ ಆಗರವಾಗಿದೆ. ಅದನ್ನು ಸರಿಪಡಿಸುವುದಕ್ಕೆ ಪ್ರಯತ್ನ ಮಾಡಿ. ನನ್ನ ಕಡೆಯಿಂದ ಎಲ್ಲ ಸಹಕಾರವಿದೆ. ಬಿಬಿಎಂಪಿ ವಿಚಾರದಲ್ಲಿ ಇನ್ನೇನಾದರೂ ಇದ್ದರೆ ಕುಮಾರಸ್ವಾಮಿ ಜತೆ ಮಾತನಾಡಿ ಸಿದ್ರಾಮಣ್ಣ ಎಂದು ದೇವೇಗೌಡರು ಹೇಳಿದ್ದಾರೆ ಎಂದು ಗೊತ್ತಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿದ್ದರಾಮಯ್ಯ, ಬೆಂಗಳೂರು ನಗರ ಪ್ರದಕ್ಷಿಣೆ ಮುಂದುವರಿಸಿ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಿದ್ದಾರೆ.