ಪಾಟ್ನಾ: ಬಿಜೆಪಿ ನೇತೃತ್ವದ ಮೈತ್ರಿಕೂಟ ಮುಖ್ಯಮಂತ್ರಿ ಅಭ್ಯರ್ಥಿಯೇ ಇಲ್ಲದೇ ಬಿಹಾರ ಚುನಾವಣೆಯನ್ನು ಎದುರಿಸುತ್ತಿರುವುದು, ವಧು-ವರರಿಲ್ಲದೇ ವಿವಾಹವನ್ನು ಆಯೋಜಿಸಿದಂತಿದೆ ಎಂದು ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಬಿಹಾರದ ಜಮುಯಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೆಡಿಯು ನೇತೃತ್ವದ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಆದರೆ ಬಿಜೆಪಿಗೆ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ವಧು-ವರರಿಲ್ಲದೇ ವಿವಾಹಕ್ಕೆ ಜನರು ಹೋಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಆರ್.ಜೆ.ಡಿ, ಜೆಡಿಯು, ಕಾಂಗ್ರೆಸ್ ಮೈತ್ರಿಮಾಡಿಕೊಂಡಿದ್ದು, ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಬಿಜೆಪಿ ತಿಳಿಸಿದೆ.
ಗುಜರಾತ್, ಮಧ್ಯಪ್ರದೇಶದಿಂದ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಿಹಾರಕ್ಕೆ ಭೇಟಿ ನೀಡುತ್ತಿದ್ದು ಕೋಮುಪ್ರಚೋದನೆ ಮಾಡುತ್ತಿದ್ದಾರೆ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಲಾಲು ಪ್ರಸಾದ್ ಯಾದವ್ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.